ಕಲಬುರಗಿಯಲ್ಲಿ ಹಾಡುಹಗಲೇ ಗುಂಡಿನ ದಾಳಿಜಿ.ಪಂ.ಮಾಜಿ ಸದಸ್ಯನ ಸಹೋದರ ಸೇರಿ ಇಬ್ಬರಿಗೆ ಗಂಭೀರ ಗಾಯ

ಕಲಬುರಗಿ,ಜ.7-ನಗರದಲ್ಲಿ ಇಂದು ಹಾಡುಹಗಲೇ ಗುಂಡಿನ ಸದ್ದು ಅನುರಣಿಸಿದೆ.
ನಗರದ ಆಳಂದ್ ಚೆಕ್‍ಪೋಸ್ಟ್ ಹತ್ತಿರ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಂತೋಷ ವಿ.ಪಾಟೀಲ ದಣ್ಣೂರ್ ಅವರ ಸಹೋದರ ಚನ್ನವೀರ ವಿಠಲರಾವ ಪಾಟೀಲ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಚನ್ನವೀರ ಪಾಟೀಲ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಲೆರೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಚನ್ನವೀರ ಪಾಟೀಲ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅವರ ಕೈಗೆ ಗುಂಡು ತುಗಲಿದೆ. ಈ ವೇಳೆ ದಾರಿ ಹೋಕನೊಬ್ಬನಿಗೂ ಗುಂಡೇಟು ಬಿದ್ದಿದೆ.
ಗುಂಡೇಟು ತಗುಲಿ ಗಾಯಗೊಂಡ ದಾರಿ ಹೋಕನನ್ನು ನಗರದ ಎಂ.ಎಸ್.ಕೆ.ಮಿಲ್ ನಿವಾಸಿ ಶೇಖ್ ಅಬೂಬಕರ್ ಸಿದ್ದಿಕಿ ಎಂದು ಗುರುತಿಸಲಾಗಿದ್ದು, ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನವೀರ ಪಾಟೀಲ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದಕ್ಕೆ ಹಳೆ ವೈಷಮ್ಯವೇ ಕಾರಣವೆನ್ನಲಾಗಿದೆ.
ಹಾಡು ಹಗಲೇ ನಡೆದ ಈ ಘಟನೆಯಿಂದ ಊರು ಕೇರಿಗೆ ಹೋಗಲು ಆಳಂದ್ ಚೆಕ್ ಪೋಸ್ಟ್ ಬಳಿ ಬಸ್ ಮತ್ತು ಇತರೆ ವಾಹನಗಳಲ್ಲಿ ಕಾಯುತ್ತ ನಿಂತಿದ್ದ ಜನ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ.
ಈ ಘಟನೆಯಿಂದ ಕೆಲಕಾಲ ಆಳಂದ ಚೆಕ್ ಪೋಸ್ಟ್‍ನಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸುದ್ದಿ ತಿಳಿದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಉಪ ಪೊಲೀಸ್ ಆಯುಕ್ತ ಅಡ್ಡೂರು ಶ್ರೀನಿವಾಸಲು, ಚೌಕ್ ಪೊಲೀಸ್ ಠಾಣೆಯ ಪಿಐ ರಾಜಶೇಖರ್ ಹಳಿಗೋದಿ, ಸಬ್ ಅರ್ಬನ್ ಠಾಣೆಯ ಪಿಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.