ಕಲಬುರಗಿಯಲ್ಲಿ ಹನುಮಾನ್ ಜಯಂತಿ: ಎಲ್ಲೆಡೆ ಭಕ್ತರ ದಂಡು, ವಿಶೇಷ ಪೂಜೆ, ರಥೋತ್ಸವ

ಕಲಬುರಗಿ:ಏ.6: ನಾಡಿನೆಲ್ಲೆಡೆ ಗುರುವಾರ ಹನುಮಾನ್ ಜಯಂತಿಯನ್ನು ಅತ್ಯಂತ ಶೃಧ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಅದರಂತೆ ನಗರದಲ್ಲಿಯೂ ಸಹ ವಿವಿಧ ದೇವಸ್ಥಾನಗಳಲ್ಲಿ ಹನುಮ ಜಯಂತಿಯನ್ನು ಶೃದ್ಧಾ, ಭಕ್ತಿಯಿಂದ ಆಚರಿಸಿದರು.
ನಗರದ ಶ್ರೀ ಕೋರಂಟಿ ಹನುಮಾನ್ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಆಗಮಿಸಿದ್ದರು. ಸರದಿ ಸಾಲಿನಲ್ಲಿ ನಿಂತು ವಿಶೇಷವಾಗಿ ಅಲಂಕರಿಸಿದ ಹನುಮಾನ್ ಮೂರ್ತಿಗೆ ನಮಿಸಿ, ಪ್ರಾರ್ಥಿಸಿದರು. ಮಹಿಳೆಯರು, ಪುರುಷರು, ಯುವಕರು, ವೃದ್ಧರು ಸೇರಿದಂತೆ ಜಾತಿ, ಮತ, ಪಂಥಗಳನ್ನು ಮೀರಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಮಹಾಪ್ರಸಾದವನ್ನೂ ಸಹ ವಿತರಿಸಲಾಯಿತು. ಸಂಜೆ ರಥೋತ್ಸವ ಸಹ ವಿಜೃಂಭಣೆಯಿಂದ ಜರುಗಿತು.
ಈ ಮಧ್ಯೆ, ಶ್ರೀ ಕೋರಂಟಿ ಹನುಮಾನ ದೇವಸ್ಥಾನ ಆವರಣದಲ್ಲಿ ಹನುಮಾನ ಜಯಂತಿ ನಿಮಿತ್ತ ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದತ್ತು ಹೆಚ್. ಭಾಸಗಿ ಅವರ ನೇತೃತ್ವದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸೇನೆಯ ಕಾರ್ಯಕರ್ತರಾದ ಶಿವುಕುಮಾರ, ಸಂತು, ಮಹೇಶ, ಹುಸೇನ್, ರಾಮಾ ಪೂಜಾರಿ ಮುಂತಾದವರು ಪಾಲ್ಗೊಂಡಿದ್ದರು.
ನಗರದ ಗುಬ್ಬಿ ಕಾಲನಿಯಲ್ಲಿರುವ ಶ್ರೀ ಸ್ಮಶಾನ್ ಹನುಮಾನ್ ದೇವಸ್ಥಾನ ಆವರಣದಲ್ಲಿ ಹನುಮಾನ್ ಜಯಂತಿ ನಿಮಿತ್ತ ವಿವಿಧ ಬಡಾವಣೆಯಿಂದ ಆಗಮಿಸಿದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಲ್ಯಾಣರಾವ್ ಶೀಲವಂತ್, ಶಿವುಕುಮಾರ್ ಕಾಳಗಿ, ಮನೋಜಕುಮಾರ್, ಪ್ರಕಾಶ್ ಕಮಲಾಪೂರಕರ್, ಸಿದ್ದಾರ್ಥ ಕೋರವಾರ್, ಉಮೇಶ್ ಶಟ್ಟಿ, ಶರಣು ಕಡಗಂಚಿ, ರಾಜು ಕಿಣಗಿ, ಗೋವಿಂದ್ ಯಾದವ್, ರೇವಣಸಿದ್ದ ಕಾಳಗಿ, ಸಂತೋಷ್ ಕೋರಿ ಮುಂತಾದವರು ಉಪಸ್ಥಿತರಿದ್ದರು.
ನಗರದ ಶಕ್ತಿನಗರದಲ್ಲಿ ಜೈ ಹನುಮಾನ್ ದೇವಸ್ಥಾನದ 33ನೇ ಜಯಂತಿ ನಿಮಿತ್ಯ ಬಡಾವಣೆಯ ಮಹಿಳೆಯರಿಂದ ತೊಟ್ಟಿಲು ಕಾರ್ಯಕ್ರಮ ಹಾಗೂ ವಿಶೇಷ ಪೂಜೆ ನಡೆಯಿತು. ನಂತರ ದೇವಸ್ಥಾನದ ವತಿಯಿಂದ ಮಹಾ ಪ್ರಸಾದ ವಿತರಿಸಲಾಯಿತು. ದೇವಸ್ಥಾನದ ಅರ್ಚಕ ಬಸಣ್ಣ ಕದರಿ, ಬಡಾವಣೆಯ ಮಹಿಳೆಯರು, ಮುಖಂಡರು ಸೇರಿ ಅಪಾರ ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದರು. ಅದೇ ರೀತಿ ವಿದ್ಯಾನಗರದ ಹನುಮಾನ್ ದೇವಸ್ಥಾನವೂ ಸೇರಿದಂತೆ ವಿವಿಧೆಡೆ ಸಹ ಭಕ್ತರ ಆರಾಧನಾ ಸ್ಥಳವಾಗಿದ್ದವು.
ನಗರದ ಪ್ರಶಾಂತ್ ನಗರದ ಶ್ರೀ ಹನುಮಾನ್ ಮಂದಿರದಲ್ಲಿ ಹನುಮ ಜಯಂತಿ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಅರ್ಚಕ ಗುಂಡಾಚಾರ್ಯ ನರಿಬೋಳ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸೂರ್ಯೋದಯ ಸಮಯಕ್ಕೆ ಹನುಮಂತ ದೇವರ ತೊಟ್ಟಿಲ ಸೇವೆ. ನಂತರ ಪವಮಾನ ಹೋಮ, ಪೂರ್ಣಾಹುತಿ, ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.
ನಂತರ ವಿವಿಧ ಮಹಿಳಾ ಭಜನಾ ಮಂಡಳಿಗಳ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು. ಪಂ ಪ್ರಸನ್ನಾಚಾರ್ಯ ಅವರಿಂದ ಸುಂದರಕಾಂಡ ಪ್ರವಚನ ಮಂಗಳ ನಡೆಯಿತು. ಬಂದ ಭಕ್ತರಿಗೆ ಕೋಸಂಭರಿ, ಪಾನಕ, ಹಾಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಡಿ.ವಿ. ಕುಲಕರ್ಣಿ. ಗೋಪಾಲರಾವ್. ಶಾಮರಾವ್, ಗುರುರಾಜ್ ಭಂಕೂರ್, ಸುದೀಂದ್ರ ಪುರೋಹಿತ್, ಪುರುಷೋತ್ತಮ್ ಮಠ್, ಬಾದನಾರಾಯಣಾಚಾರ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನಗರದ ಬ್ರಹ್ಮಪೂರ್ ಬಡಾವಣೆಯ ಗಂಗಾನಗರದಲ್ಲಿಯೂ ಸಹ ಹನುಮಾನ್ ಜಯಂತಿ ಅಂಗವಾಗಿ ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಗಳು ನೆರವೇರಿದವು. ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವವು ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಜರುಗಿದವು.