ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಮುಖ್ಯಮಂತ್ರಿಗಳಿಗೆ ಮನವಿ:ಬಿ.ಶ್ರೀರಾಮುಲು

ಕಲಬುರಗಿ,ಜು.19: ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕೆಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮಂಗಳವಾರ ಕಲಬುರಗಿ ನಗರದ ಆರ್.ಟಿ.ಓ ಕ್ರಾಸ್ ಬಳಿ 9.50 ಕೋಟಿ ರೂ. ವೆಚ್ಚದಲ್ಲಿ ನೂತನ ಜಂಟಿ ಸಾರಿಗೆ ಆಯುಕ್ತರ ಕಚೇರಿ, ಉಪ ಸಾರಿಗೆ ಆಯುಕ್ತರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ ಇಲ್ಲಿ ಸಂಪುಟ ಸಭೆ ನಡೆಸಿ ಈ ಭಾಗದ ಅಭಿವೃದ್ದಿಗೆ ಹಲವಾರು ನಿರ್ಣಯ ಕೈಗೊಂಡಿದ್ದಾರೆ. ಹಿಂದುಳಿವಿಕೆಯನ್ನು ಹೋಗಲಾಡಿಸಲು ತಾವು ಸಹ ಇಲ್ಲಿ ಸಂಪುಟ ಸಭೆ ನಡೆಸಬೇಕೆಂದು ಸಿ.ಎಂ. ಬಸವರಾಜ ಬೊಮ್ಮಾಯಿ ಅವರಲ್ಲಿ ಕೋರಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಸಹ ಸಹಮತಿ ವ್ಯಕ್ತಪಡಿಸಿದ್ದಾರೆ ಎಂದು ಬಿ.ಶ್ರೀರಾಮುಲು ತಿಳಿಸಿದರು.

ಕಲಬುರಗಿಯ ನೂತನ ಆರ್.ಟಿ.ಓ ಕಟ್ಟಡವು 1.05 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದ್ದು, ನೆಲ ಮಹಡಿ, ಮೊದಲನೇ ಮತ್ತು ಎರಡನೇ ಮಹಡಿ ಹೊಂದಿದೆ. ಇಂದು ಬೀದರದಲ್ಲಿಯೂ ಆರ್.ಟಿ.ಓ ಕಚೇರಿ ಹೊಸ ಕಟ್ಟಡಕ್ಕೆ ಪೂಜೆ ಸಲ್ಲಿಸಿ ಬಂದಿದ್ದೇನೆ ಎಂದರು.

ಆಜಾದಿ ಕಾ ಅಮೃತ್ ಮಹೋತ್ಸವವನ್ನು ನೆನಪಿನಲ್ಲಿ ಕಲಬುರಗಿಯಲ್ಲಿ ನಡೆಸಲು ಉದ್ದೇಶಿಸಿರುವ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ದೇಶದ ಗೌರವಾನ್ವಿತ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿ ಇಡೀ ಸಚಿವ ಸಂಪುಟವನ್ನು ಆಹ್ವಾನಿಸಿ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 8-10 ವರ್ಷಗಳ ಹಳೇ ಬಸ್‍ಗಳು ಇನ್ನು ಓಡಾಡುತ್ತಿವೆ. ಬಡ ಮತ್ತು ಮಧ್ಯಮ ವರ್ಗ ಸಾರಿಗೆಗೆ ಬಸ್‍ಗಳನ್ನೆ ಹೆಚ್ಚು ಅವಲಂಬಿಸಿದ್ದು, ಹೀಗಾಗಿ ಈ ಭಾಗಕ್ಕೆ ವಿಶೇಷವಾಗಿ 500 ಕೋಟಿ ರೂ. ವೆಚ್ಚದಲ್ಲಿ 7 ಜಿಲ್ಲೆಗಳಿಗೆ ಹೊಸ ಬಸ್ ಖರೀದಿಸಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದರು.

ತಾವು ಸಾರಿಗೆ ಸಚಿವರಾದ ನಂತರ ಇಲಾಖೆಯಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 30ಕ್ಕೂ ಹೆಚ್ಚು ಸೇವೆ ಆನ್‍ಲೈನ್ ಮೂಲಕ ನೀಡಲಾಗುತ್ತಿದೆ. ಸಾರಿಗೆ ಸಂಸ್ಥೆಯನ್ನು ಲಾಭದಾಯಕವಾಗಿಸಲು ಮತ್ತು ಇಲಾಖೆಯ ಸುಧಾರಣೆಗೆ ನಿವೃತ್ತ ಐ.ಎ.ಎಸ್. ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ದೃಷ್ಠಿಯಲ್ಲಿ ಪ್ರಸಕ್ತ 2022-23ನೇ ಸಾಲಿಗೆ 3000 ಕೋಟಿ ರೂ. ಅನುದಾನ ರಾಜ್ಯ ಸರ್ಕಾರ ಘೋಷಿಸಿದೆ. ಇದರಲ್ಲಿ ಈಗಾಗಲೆ 1500 ಕೋಟಿ ರೂ. ಮೈಕ್ರೋ ನಿಧಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಉಳಿದ 1500 ಕೋಟಿ ರೂ.ಗಳ ಮ್ಯಾಕ್ರೋ ನಿಧಿಯಡಿ ಬೃಹತ್ ಯೋಜನೆಗಳನ್ನು ಹಾಕಿಕೊಳ್ಳಲು ನಿರ್ಧರಿಸಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಇದು ಅಂತಿಮವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕಲಬುರಗಿ ಜನತಾ ಬಜಾರ್ ಅಧ್ಯಕ್ಷ ದತ್ತು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತ ಟಿ.ಹೆಚ್.ಎಂ.ಕುಮಾರ, ಅಪರ ಸಾರಿಗೆ ಆಯುಕ್ತರಾದ ಮಾರುತಿ ಸಾಂಬ್ರಾಣಿ, ಬಿ.ಪಿ.ಉಮಾಶಂಕರ, ಸಿ. ಮಲ್ಲಿಕಾರ್ಜುನ, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪಾ, ಸಿ.ಟಿ.ಎಂ. ವಿ.ಎಸ್.ಸಂತೋಷಕುಮಾರ, ಬೀದರ್ ಆರ್.ಟಿ.ಓ ನಾರಾಯಣಸ್ವಾಮಿ ಸೇರಿದಂತೆ ಸಾರಿಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿದ್ದರು.
ಕಲಬುರಗಿ ವಿಭಾಗದ ಉಪ ಸಾರಿಗೆ ಆಯುಕ್ತ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ನೂರ್ ಮೊಹಮ್ಮದ್ ಭಾμÁ ಸ್ವಾಗತಿಸಿದರು.