ಕಲಬುರಗಿಯಲ್ಲಿ ಶ್ರೀರಾಮನಾಮ ಕಲರವ

ಕಲಬುರಗಿ,ಜ.22: ಅಯೋಧ್ಯೆ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲೆಡೆ ಭಕ್ತಿಭಾವ ಸಂಭ್ರಮ ಹರ್ಷದ ಹೊನಲು ಹರಿದಿದೆ.ಶ್ರೀರಾಮನಾಮ ಕಲರವ ಕೇಳಿಸುತ್ತಿದೆ.
ನಗರದ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನ,ಕೋಟನೂರು ಮಠ,ಕರುಣೇಶ್ವರ ನಗರದ ಕೋರಿಸಿದ್ದೇಶ್ವರ ಮಠ , ಹೊಸ ಜೇವರಗಿ ರಸ್ತೆ ,ಬ್ರಹ್ಮಪುರ,ಮಕ್ತಂಪುರದ ಶ್ರೀರಾಮಮಂದಿರ ಮತ್ತು ಎಲ್ಲ ಹನುಮಾನ ಮಂದಿರ, ಹೊಸ ಜೇವರಗಿ ರ್ತೆಯ ಕೃಷ್ಣೇಶ್ವರ ಮಂದಿರ ,ವೆಂಕಟೇಶ್ವರ ಮಂದಿರಗಳಲ್ಲಿ ವಿಶೇಷ ಪೂಜೆ,ಹೋಮ ಹವನ, ರಾಮಜಪ,ಮಂಗಳಾರತಿ ,ಮಹಾಪ್ರಸಾದ ವಿತರಣೆ ಮೊದಲಾದ ಕಾರ್ಯಕ್ರಮಗಳು ನಡೆದಿವೆ.ರಸ್ತೆಗಳಲ್ಲಿ, ವಿವಿಧ ಕಾಲೋನಿಗಳಲ್ಲಿ ಬಹುತೇಕ ಕಡೆ ಕೇಸರಿ ವರ್ಣದ ರಾಮಧ್ವಜ ರಾಜಾಜಿಸುತ್ತಿದೆ.ಆಟೋ,ದ್ವಿಚಕ್ರವಾಹನಗಳಿಗೆ ಧ್ವಜಗಳನ್ನು ಅಳವಡಿಸಿ ಸಂಭ್ರಮಿಸುತ್ತಿದ್ದಾರೆ
ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಸಂಘಸಂಸ್ಥೆಗಳಿಂದ ಮಹಾಪ್ರಸಾದ ದಾಸೋಹ ಕಾರ್ಯ ನಡೆಯುತ್ತಿದೆ.ಸಂಜೆ ದೀಪೋತ್ಸವ ನಡೆಯಲಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಬಹುತೇಕ ಭಕ್ತರ ಮನೆಮನೆಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ,ಶ್ರೀರಾಮದೇವರ ಭಾವಚಿತ್ರ ತಲುಪಿಸಲಾಗಿದೆ.ಟ್ರಸ್ಟ್‍ನ ಕೋರಿಕೆಯಂತೆ ಮೂರ್ತಿ ಪ್ರತಿಷ್ಠಾಪನೆ ಮುಹೂರ್ತದಲ್ಲಿ ಮನೆಮನೆಗಳಲ್ಲಿ ಗೃಹಿಣಿಯರು ಮಂಗಳಾರುತಿ ಮಾಡಿದರು.ಸಂಜೆ ಮನೆಯಂಗಳಲ್ಲಿ ದೀಪ ಬೆಳಗಿಸಿ ಮತ್ತೊಮ್ಮೆ ದೀಪಾವಳಿ ಆಚರಣೆಗೆ ಸಿದ್ಧರಾಗಿದ್ದಾರೆ