ಕಲಬುರಗಿಯಲ್ಲಿ ವಾರದ ಮೂರು ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ

ಕಲಬುರಗಿ:ಮೇ.18: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಮತ್ತಷ್ಟು ಬಿಗಿ ಕ್ರಮಗಳಿಗೆ ಮುಂದಾಗಿದ್ದು, ಇದೇ ವಾರದಿಂದ ಮೂರು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನಿಸಿದೆ.

ಜಿಲ್ಲಾದ್ಯಂತ ಈ ವಾರದ ಗುರುವಾರ, ಶುಕ್ರವಾರ ಮತ್ತು ಶನಿವಾರ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಘೋಷಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಾರದ ಮೂರು ದಿನ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತದೆ. ಇದನ್ನು ನೋಡಿಕೊಂಡು ಮುಂದಿನ ದಿನಗಳ ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದರು.

ಸಂಪೂರ್ಣ ಲಾಕ್ ಡೌನ್ ನ ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ತರಕಾರಿ, ದಿನಸಿ ಖರೀದಿಗೂ ಕೂಡ ಅವಕಾಶ ಇರಲ್ಲ. ಹೋಟೆಲ್ ನಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.