ಕಲಬುರಗಿಯಲ್ಲಿ ಭ್ರೂಣ ಲಿಂಗ ಪತ್ತೆ ದಂಧೆ ಬಹಿರಂಗ

ಕಲಬುರಗಿ.ಸೆ.15: ಮಹಾರಾಷ್ಟ್ರದ ಉಸ್ಮಾನಾಬಾದ್ ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಕಳೆದ ಬುಧವಾರ ಸಂಜೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಕೈಗೊಂಡು ಭ್ರೂಣ ಲಿಂಗ ಪತ್ತೆ ದಂಧೆ ಬಯಲಿಗೆಳೆದ ಘಟನೆ ವರದಿಯಾಗಿದೆ.
ನಗರದ ಎಸ್‍ಟಿಬಿಟಿ ಕ್ರಾಸ್ ಹತ್ತಿರದ ಬಾಬಾ ಹೌಸ್ ಬಳಿ ಇರುವ ಡಾ. ಗುರುರಾಜ್ ಕುಲಕರ್ಣಿ ಅವರ ಆಸ್ಪತ್ರೆಯಲ್ಲಿ ಅಕ್ರಮ ಭ್ರೂಣ ಲಿಂಗ ಪತ್ತೆ ದಂಧೆ ಬಯಲಿಗೆಳೆಯಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ರಾಜಶೇಖರ್ ಮಾಲಿ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಮನೆಯೊಂದರ ಬಾಡಿಗೆ ಕೋಣೆಯಲ್ಲಿದ್ದ ಭ್ರೂಣಲಿಂಗ ಪರೀಕ್ಷೆ ಯಂತ್ರವನ್ನು ವಶಕ್ಕೆ ಪಡೆದರು.
ಮಹಾರಾಷ್ಟ್ರದಿಂದ ನಗರಕ್ಕೆ ಬಂದು ಕೆಲವರು ಭ್ರೂಣಲಿಂಗ ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದಾರೆ. ಈ ಕುರಿತು ಮಾಹಿತಿ ಸಂಗ್ರಹಿಸಿದ ಉಸ್ಮಾನಾಬಾದ್ ಆರೋಗ್ಯ ಇಲಾಖೆ ಸಿಬ್ಬಂದಿ ನಿನ್ನೆಯೇ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿಯ ಮೇರೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡರು.
ದಾಳಿಯ ವೇಳೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿನ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ತಂಡದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೋಮಿಯೋಪಥಿಕ್ ವೈದ್ಯರಾಗಿರುವ ಡಾ. ಗುರುರಾಜ್ ಕುಲಕರ್ಣಿ ಅವರು ಗ್ರಾಮೀಣ ಪ್ರದೇಶಗಳಿಗೂ ಹೋಗಿ ಭ್ರೂಣಲಿಂಗ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂಬ ಆರೋಪ ಇದೆ.
ಬ್ರಹ್ಮಪೂರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಬಯಲಿಗೆ ಬಂದಿದೆ. ಪ್ರಕರಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿಲ್ಲ. ಇಂತಹ ಪ್ರಕರಣಗಳನ್ನು ಸಹಾಯಕ ಆಯುಕ್ತರ ಒಪ್ಪಿಗೆಯ ಮೇಲೆ ತನಿಖೆ ಕೈಗೊಳ್ಳಬಹುದಾಗಿದ್ದು, ಆ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರ ಬಳಿ ಪ್ರಕರಣ ಸ್ಥಳಾಂತರಗೊಂಡಿದೆ.
ಈ ಮೊದಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಅಧಿಕಾರ ಇತ್ತು. ಈಗ ಅಧಿಕಾರವನ್ನು ಸಹಾಯಕ ಆಯುಕ್ತರಿಗೆ ವರ್ಗಾವಣೆ ಮಾಡಿದ್ದರಿಂದ ಸಹಾಯಕ ಆಯುಕ್ತರ ಸೂಕ್ತ ಕ್ರಮಕ್ಕಾಗಿ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.