ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತರ ದಾಳಿ

ಕಲಬುರಗಿ,ಜೂ.28: ಆದಾಯಕ್ಕಿಂತ ಹೆಚ್ಚು ಸಂಪತ್ತು ಗಳಿಸಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತರು ಬುಧವಾರ ಬೆಳಂಬೆಳಿಗ್ಗೆ ರಾಜ್ಯದ ವಿವಿಧೆಡೆ ದಾಳಿ ಮಾಡಿದ್ದು, ಅದೇ ರೀತಿ ನಗರದಲ್ಲಿನ ರಾಯಚೂರು ಜಿಲ್ಲೆಯ ಭ್ರಷ್ಟ ಅಧಿಕಾರಿಯ ಮನೆಯ ಮೇಲೆ ಲೋಕಾಯುಕ್ತರು ದಾಳಿ ಮಾಡಿದರು.
ಲೋಕಾಯುಕ್ತ ವರಿಷ್ಠಾಧಿಕಾರಿ ಕರ್ನೂಲ್ ಅವರ ನೇತೃತ್ವದಲ್ಲಿನ 15 ಸಿಬ್ಬಂದಿಗಳಿದ್ದ ಲೋಕಾಯುಕ್ತರ ತಂಡವು ಬೆಳಿಗ್ಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ್ ಅವರು ಮೂಲತ: ಜಿಲ್ಲೆಯ ಆಳಂದ್ ತಾಲ್ಲೂಕಿನ ಮುನ್ನಳ್ಳಿ ಗ್ರಾಮದ ನಿವಾಸಿ ಶರಣಪ್ಪ ಮಡಿವಾಳ್ ಅವರಿಗೆ ಸೇರಿದ ಮನೆ ಹಾಗೂ ತೋಟದ ಮೇಲೆ ದಾಳಿ ಮಾಡಿದರು.
ನಗರದ ಹೊರವಲಯದಲ್ಲಿನ ಖಣದಾಳ್ ಗ್ರಾಮದಲ್ಲಿನ ಭವ್ಯ ಫಾರ್ಮ್ ಹೌಸ್ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರಿನ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿನ ಅಕ್ರಮವಾಗಿ ಸಂಪಾದಿಸಿರುವ ಹಣ ಹಾಗೂ ಇತರೆ ಸಂಪತ್ತಿನ ಕುರಿತು ಏಕಕಾಲಕ್ಕೆ ಲೋಕಾಯುಕ್ತರು ದಾಳಿ ಮಾಡಿ ಪರಿಶೀಲನೆ ಮಾಡಿದರು.
ನಗರದಲ್ಲಿನ ಫಾರ್ಮ್ ಹೌಸ್‍ಗೆ ಬಂದಾಗ ಭವ್ಯ ಮನೆಯು ಕೀಲಿ ಹಾಕಿದ್ದು, ಲೋಕಾಯುಕ್ತರು ನಕಲಿ ಕೀ ತಯಾರಿಸುವವನಿಗೆ ಕರೆಸಿ ನಕಲೀ ಕೀ ಬಳಸಿ ಮನೆಯ ಬಾಗಿಲು ತೆರೆದು ಮನೆಯೊಳಗಿದ್ದ ಹಣ ಹಾಗೂ ಸಂಪತ್ತಿನ ಕುರಿತು ಮಾಹಿತಿಯನ್ನು ಕಲೆ ಹಾಕಿದರು.
ಭ್ರಷ್ಟ ಅಧಿಕಾರಿಯ ಮನೆಯು ಕೀಲಿ ಹಾಕಿದ್ದರೆ ಆ ಮನೆಯ ಕೀಲಿ ಲೋಕಾಯುಕ್ತ ಅಧಿಕಾರಿಗಳು ತೆಗೆಯಬಹುದಾಗಿದೆ. ಇಲ್ಲದಿದ್ದರೆ ಬಾಗಿಲು ಸಹ ಮುರಿಯುವ ಅಧಿಕಾರವೂ ಇದೆ. ಆದಾಗ್ಯೂ, ಲೋಕಾಯುಕ್ತರು ನಕಲಿ ಕೀ ತಯಾರಕನಿಗೆ ಕರೆಸಿ ನಕಲೀ ಕೀ ಮೂಲಕ ಕೀಲಿ ತೆರೆದು ಒಳಹೋಗಿ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಶರಣಪ್ಪ ಮಡಿವಾಳ್ ಅವರಿಗೆ ಸೇರಿದ ಫಾರ್ಮ್ ಹೌಸ್‍ನ ಭವ್ಯ ಬಂಗ್ಲೆ ಸುಮಾರು ಒಂದು ಕೋಟಿ ರೂ.ಗಳು ಮೌಲ್ಯದ್ದೆಂದು ಹೇಳಲಾಗಿದೆ. ಅದೇ ರೀತಿ ನಾಗನಹಳ್ಳಿ- ಖಣದಾಳ್ ರಸ್ತೆಯಲ್ಲಿ 12 ಎಕರೆ ಜಮೀನಿನಲ್ಲಿ ತೋಟಗಾರಿಕೆ ಮಾಡುತ್ತಿದ್ದು, ಮಾವು, ಪೇರಲ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ತೋಟದಲ್ಲಿ ಡುಪ್ಲೆಕ್ಸ್ ಮನೆ ಇದ್ದು, ಎರಡು ಟ್ರ್ಯಾಕ್ಟರ್‍ಗಳನ್ನೂ ಸಹ ಹೊಂದಿದ್ದಾರೆ. ಅವುಗಳ ಮೌಲ್ಯದ ಕುರಿತು ಲೆಕ್ಕ ಹಾಕುತ್ತಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.