ಕಲಬುರಗಿಯಲ್ಲಿ ಬೆಂಕಿಯಂತ ಬಿಸಿಲು !

ಕಲಬುರಗಿ,ಮೇ.16-ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲಿನ ಪ್ರಕೋಪ ಹೆಚ್ಚಾಗಿದ್ದು, ಬೆಂಕಿಯಂತ ಬಿಸಿಲಿಗೆ ಜನ ಬಸವಳಿದು ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ಗರಿಷ್ಠ 41, ಕನಿಷ್ಠ 25.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಪ್ರಸಕ್ತ ವರ್ಷ ಅತಿ ಹೆಚ್ಚು ತಾಪಮಾನ ದಾಖಲಾದ ದಿನ ಇದಾಗಿದೆ.
ಹಗಲು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣಕ್ಕೆ ರಾತ್ರಿ ಧಗೆಯೂ ಹೆಚ್ಚಾಗುತ್ತಿದ್ದು, ಧಗೆಯ ಕಾರಣಕ್ಕೆ ಜನ ಮನೆ ಮಾಳಿಗೆಯಲ್ಲಿ ಮಲಗುತ್ತಿರುವುದು ಸಾಮಾನ್ಯವಾಗಿದೆ. ಧಗೆಯ ಕಾರಣಕ್ಕೆ ಮನೆ ಮಾಳಿಗೆ ಮೇಲೆ ಮಲಗಿದ್ದ ಸಮಯ ಸಾಧಿಸಿ ಕಳ್ಳರು ಮನೆ ಕಳವು ಮಾಡಿದಂತಹ ಪ್ರಕರಣಗಳು ನಗರದ ಅಲ್ಲಲ್ಲಿ ನಡೆದಿರುವುದು ಬೆಳಕಿಗೆ ಬಂದಿರುವುದರಿಂದ ಜನ ಮನೆಗೆ ಬೀಗ ಹಾಕಿ ಮನೆ ಮಾಳಿಗೆ ಮೇಲೆ ಮಲಗಲೂ ಸಹ ಭಯ, ಆತಂಕ ಪಡುವಂತಾಗಿದೆ.
ಸೂರ್ಯೋದಯವಾಗುತ್ತಿದ್ದಂತೆಯೇ ತಣ್ಣಗೆ ಏರುವ ಬಿಸಿಲ ತಾಪ ಮಧ್ಯಾಹ್ನದ ವೇಳೆಗೆ ಹೆಚ್ಚುತ್ತ ಹೋಗಿ ಭೂಮಿ ಕಾದ ಕೆಂಡವಾದಂತಾಗುತ್ತಿದೆ. ಸಾಯಂಕಾಲ ಆರು ಗಂಟೆಯವರೆಗೂ ಬಿಸಿಲ ತಾಪ ಹೆಚ್ಚಾಗಿಯೇ ಇರುವುದರಿಂದ ಈ ಅವಧಿಯಲ್ಲಿ ಜನ ಹೊರಗಡೆ ಓಡಾಡಲು ಹೆದರುವಂತಾಗಿದೆ.
ಜಿಲ್ಲೆಯಲ್ಲಿ ಇನ್ನೂ ಎರಡ್ಮೂರು ದಿನ ಬಿಸಿಲಿನ ತಾಪ ಇದೇ ರೀತಿ ಹೆಚ್ಚಾಗಿರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಸಿಲ ತಾಪ ಹೆಚ್ಚಾಗಿರುವುದರಿಂದ ಮಧ್ಯಾಹ್ನದ ವೇಳೆ ಜನರು ಬಿಸಿಲಲ್ಲಿ ಓಡಾಡುವುದನ್ನು ಆದಷ್ಟು ತಪ್ಪಿಸಬೇಕು, ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರ ಮೂಲಕ ಬಿಸಿಲಿನಿಂದಾಗ ಬಹುದಾದ ಅನಾಹುತಗಳಿಂದ ತಪ್ಪಿಸಿಕೊಳ್ಳಬೇಕಾಗಿದೆ. ಬಿಸಿಲ ತಾಪ ಹೆಚ್ಚಾಗಿರುವುದರಿಂದ ಸನ್ ಸ್ಟ್ರೋಕ್, ನಿರ್ಜಲೀಕರಣದಂತಹ ಸಮಸ್ಯೆಗಳು ತಲೆದೋರಬಹುದಾದ ಸಾಧ್ಯತೆಗಳಿದ್ದು, ಆದಷ್ಟು ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಿ, ಆಗಾಗ ನೀರು ಕುಡಿಯಿರಿ, ತಂಪು ಪಾನಿಯಗಳಾದ ಎಳೆ ನೀರು, ಲಿಂಬು ಷರಬತ್ ಕುಡಿಯುವುದರ ಜೊತೆಗೆ ಕಲ್ಲಂಗಡಿ ಸೇರಿದಂತೆ ಇತರೆ ನೀರಿನಂಶ ಹೆಚ್ಚಾಗಿರುವ ಹಣ್ಣು ಸೇವನೆ ಮಾಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.