ಕಲಬುರಗಿಯಲ್ಲಿ ಬೃಹತ್ ಯೋಗಾಥಾನ್ ಕಾರ್ಯಕ್ರಮ:ಪೂರ್ವಸಿದ್ಧತೆ ಸಭೆ ನಡೆಸಿದ ಡಿ.ಸಿ. ಯಶವಂತ ವಿ. ಗುರುಕರ್

ಕಲಬುರಗಿ,ಜ.9: ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಇದೇ ಜನವರಿ 15 ರಂದು ಕಲಬುರಗಿ ನಗರದ ಪೊಲೀಸ್ ಪರೇಡ್ ಗ್ರೌಂಡ್ ಮತ್ತು ಎನ್.ವಿ.ಮೈದಾನದಲ್ಲಿ ಹಮ್ಮಿಕೊಂಡಿರುವ ಯೋಗಾಥಾನ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಸೋಮವಾರ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಗಿನ್ನೀಸ್ ದಾಖಲೆಗೆ ರಾಜ್ಯದಾದ್ಯಂತ ಏಕಕಾಲದಲ್ಲಿ ಶಿಷ್ಠಾಚಾರದ ಯೋಗಾಭ್ಯಾಸ ಕಾರ್ಯಕ್ರಮ ಇದಾಗಿದೆ. ಕಲಬುರಗಿಯಲ್ಲಿ 20 ಸಾವಿರಕ್ಕೂ ಹೆಚ್ಚಿನ ಜನರು ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲಿಯೂ ಲೋಪವಾಗದಂತೆ ಎಲ್ಲಾ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಮತ್ತು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪೊಲೀಸ್ ಪರೇಡ್ ಮೈದಾನ ಮತ್ತು ಎನ್.ವಿ.ಮೈದಾನ ಎರಡರಲ್ಲೂ ಮುಖ್ಯ ವೇದಿಕೆ ನಿರ್ಮಾಣ, ಯೋಗ ಶಿಕ್ಷಕರಿಗೆ ಉಪ ವೇದಿಕೆ, ಮೈದಾನ ಸ್ವಚ್ಪತೆ, ಮ್ಯಾಟ್ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಸೈನ್ ಬೋರ್ಡ್ ಅಳವಡಿಸಬೇಕು ಮತ್ತು ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಇನ್ನು ಜನವರಿ 13 ರಂದು ಯೋಗ ಪಟುಗಳಿಂದ ಪೂರ್ವಾಭ್ಯಾಸ ಮಾಡಿಸಬೇಕು ಎಂದ ಅವರು ಯೋಗಾಥಾನ್ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಯವರು ತಮಗೆ ವಹಿಸಿಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಡಿ. ಬದೋಲೆ, ಮಹಾನಗರ ಪಾಲಿಕೆಯ ಆಯುಕ್ತ ಪಾಟೀಲ ಭುವನೇಶ ದೇವಿದಾಸ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಆಹಾರ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ ಸೇರಿದಂತೆ ವಿಶ್ವವಿದ್ಯಾಲಯ ಅಧ್ಯಾಪಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು, ಯೋಗ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.