ಕಲಬುರಗಿಯಲ್ಲಿ ಏಮ್ಸ್, ರೈಲ್ವೆ ವಿಭಾಗೀಯ ಕಚೇರಿ ಆರಂಭಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ,ಜು.11:ನಗರದಲ್ಲಿ ಏಮ್ಸ್ ಮತ್ತು ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಕಲ್ಯಾಣ ನಾಡು ವಿಕಾಸ್ ವೇದಿಕೆಯ ಕಾರ್ಯಕರ್ತರು ಮಂಗಳವಾರ ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಕಾರರು ಸಲ್ಲಿಸಿದ ಮನವಿಯಲ್ಲಿ, ರಾಜ್ಯದಲ್ಲಿ ಕಲಬುರ್ಗಿ ವಿಭಾಗ ಮತ್ತು ಜಿಲ್ಲೆಯು ಅತ್ಯಂತ ಹಿಂದುಳಿದಿದೆ. ಹೈದ್ರಾಬಾದ್ ನಿಜಾಮರ ಕರ್ನಾಟಕ ರಾಜ್ಯದ ಆಡಳಿತಕ್ಕೆ ಒಳಪಟ್ಟು ಅಭಿವೃದ್ಧಿಯಲ್ಲಿ ಹಿಂದುಳಿದ ನಾವುಗಳು, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇಂದಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಲತಾಯಿ ಧೋರಣೆಯಿಂದ ಎಲ್ಲ ರೀತಿಯ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದೇವೆ. ಕೇಂದ್ರ ಸರ್ಕಾರದ ಪಾಲಿಗಂತೂ ಜಿಲ್ಲೆಯ ಜನರು ಮಲತಾಯಿ ಮಕ್ಕಳು, ಸವತಿ ಮಕ್ಕಳು ಆಗಿದ್ದಾರೆ ಎಂದು ಟೀಕಿಸಿದರು.
ಕೂಡಲೇ ನಗರದಲ್ಲಿ ಏಮ್ಸ್ ಹಾಗೂ ವಿಭಾಗೀಯ ರೈಲ್ವೆ ಕಚೇರಿಯನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉದಯಕುಮಾರ್ ಖಣಗೆ, ಬಾಬು ಮದನಕರ್, ಸೂರ್ಯಪ್ರಕಾಶ್ ಚಾಳಿ, ಅವಿನಾಶ್ ಕಪನೂರ್, ಜೈಭೀಮ್ ಮಾಳಗೆ, ಮೋಹನ್ ಸಾಗರ್, ಪ್ರವೀಣ್ ಕೇಮನ್, ಶ್ರವಣ್ ಖಜಂದಾರ್, ಅರುಣ್ ಇನಾಮದಾರ್, ಶೇಖರ್ ಬಿಲಕರ್, ದತ್ತು ಜಮಾದಾರ್, ನಾಗು ಡೊಂಗರಗಾಂವ್, ದೇವು ದೊರೆ, ಕುಶಾಲ್ ಕಪನೂರ್, ಸುನೀಲ್ ಭಾಷಾ, ಪ್ರಶಾಂತ್ ಆಲಗೂಡ್, ಮಹೇಶ್ ಮಾನೆ, ಕಂಠೆಪ್ಪ ಮುರಡಿ, ರಾಹುಲ್ ಗಾಯಕವಾಡ್, ಕರಣ್ ಭಾಗೋಡಿ ಮುಂತಾದವರು ಪಾಲ್ಗೊಂಡಿದ್ದರು.