ಕಲಬುರಗಿಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಬೇಕು : ಡಾ. ಜಯಶ್ರೀ ಚನ್ನಾಳ

ಕಲಬುರಗಿ.ಜ.7:ಮುಂದಿನ ವರ್ಷದೊಳಗಾಗಿ ಕಲಬುರಗಿಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ಜಯಶ್ರೀ ಚನ್ನಾಳ ಕರೆ ನೀಡಿದರು.
ಗುರುವಾರ ಜಿಲ್ಲಾ ಪಂಚಾಯತ ನೂತನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೆÇಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸಹಾಯವಾಣಿ ಮತ್ತು ಪಾಲನಾ ಸಂಸ್ಥೆಗಳು, ನಿರ್ದೇಶಕರು, ಮಕ್ಕಳ ಅಧೀಕ್ಷಕರು ಮತ್ತು ಮುಖ್ಯಸ್ಥರು, ಸಿಬ್ಬಂದಿಗಳಿಗೆ “ಬಾಲಾ ನ್ಯಾಯ ಕಾಯ್ದೆ-2015ರ” ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದ್ದು, ಇದನ್ನು ಪರಿವೀಕ್ಷಣಾಧಿಕಾರಿಗಳು ಜನವರಿ 21 ರಿಂದ ಜನವರಿ, 2022ವರೆಗೂ ಜಿಲ್ಲೆಯಲ್ಲಿ ಒಂದು ಬಾಲ್ಯ ವಿವಾಹ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಬಾಲ್ಯವಿವಾಹ ಬಗ್ಗೆ ಮಾಹಿತಿ ನೀಡಿದವರಿಗೆ ಪೆÇ್ರೀತ್ಸಾಹಧನ ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು.
ಬಾಲ್ಯವಿವಾಹ, ಬಾಲಾಕಾರ್ಮಿಕ ಪದ್ಧತಿಗಳು ಸೇರಿದಂತೆ ಹಲವು ಸಮಸ್ಯೆಗಳು ಬಾಲಾ ನ್ಯಾಯ-2015 ಕಾಯ್ದೆಯಲ್ಲಿ ಬರುವುದರಿಂದ ಇವುಗಳನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೋವಿಡ್ ನಿಂದಾಗಿ ಅನೇಕ ಸಮಸ್ಯೆಗಳು ಉಂಟಾಗಿದ್ದು, ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೀಮಸೇನ್ ಗುಡೂರು ಅವರು, ಮಕ್ಕಳ ಕಾಯ್ದೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಮಕ್ಕಳ ಸರ್ವತೋಮುಖ ಬೆಳವಣಿಗೆ ಮುಖ್ಯವಾಗಿದೆ. ಇವತ್ತಿನ ಮಕ್ಕಳು ತುಂಬಾ ಸೂಕ್ಷ್ಮ ಮನಸ್ಥಿತಿಯವರಾಗಿದ್ದು, ಮಕ್ಕಳ ಮಾನಸಿಕ, ಭೌತಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಜಿಮ್ಸ್ ಇ.ಎನ್.ಟಿ ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ ಸತೀಶ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಸಿಸ್ಟೆರ್ ರೀನಾ ಡಿಸೋಜಾ, ಬಾಲಾ ನ್ಯಾಯ ಮಂಡಳಿಯ ಸದಸ್ಯೆ ಗೀತಾ ಸಜ್ಜನಶೆಟ್ಟಿ, ಮಕ್ಕಳ ಸಹಾಯವಾಣಿ ನೋಡಲ್ ಕೇಂದ್ರ ನಿರ್ದೇಶಕಿ ಡಾ. ರೇಣುಕಾ ಗುಬ್ಬೆವಾಡ, ಮಕ್ಕಳ ಸಹಾಯವಾಣಿ ಮತ್ತು ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾದರ್ ಸಜೀ ಜಾರ್ಜ್, ಮಕ್ಕಳ ಕಲ್ಯಾಣ ಕೇಂದ್ರ, ಕಲಬುರಗಿ ಮತ್ತು ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೆಳಗುಂಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಉಪಸ್ಥಿತರಿದ್ದರು.