
ಕಲಬುರಗಿ:ನ.13: ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಿಐಡಿಗೆ ತನಿಖೆಗೆ ಒಪ್ಪಿಸಿದ್ದು, ಆ ಹಿನ್ನೆಲೆಯಲ್ಲಿ ಸೋಮವಾರ ಸಿಐಡಿ ವರಿಷ್ಠಾಧಿಕಾರಿ ರಾಘವೇಂದ್ರ ಹೆಗಡೆ ಅವರ ನೇತೃತ್ವದ ತಂಡವು ನಗರದ ಹೊಸ ಐವಾನ್ ಶಾಹಿ ಅತಿಥಿಗೃಹದ ಆವರಣದಲ್ಲಿರುವ ಸಿಐಡಿ ಕಚೇರಿಗೆ ಬೆಳಿಗ್ಗೆ ಆಗಮಿಸಿತು.
ಕೆಇಎ ಪರೀಕ್ಷಾ ಅಕ್ರಮಗಳು ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿಯೇ ಪತ್ತೆಯಾಗಿರುವುದರಿಂದ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನಕ್ಕೆ ತಮ್ಮ ತಂಡದೊಂದಿಗೆ ಸಿಐಡಿ ತನಿಖಾಧಿಕಾರಿಗಳು ಆಗಮಿಸಿದರು.
ಈಗಾಗಲೇ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್‍ನಿಗೆ ಬಂಧಿಸಲಾಗಿದ್ದು, ನವೆಂಬರ್ 15ರವರೆಗೆ ಆತನಿಗೆ ನ್ಯಾಯಾಂಗ ಬಂಧನವಿದೆ. ಈಗಾಗಲೇ ಪ್ರಮುಖ ಆರೋಪಿಯನ್ನು ಸ್ಥಳೀಯ ಪೋಲಿಸರು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಕಲಬುರ್ಗಿ ಮತ್ತು ಯಾದಗಿರಿಯಲ್ಲಿ ಅಕ್ರಮಗಳು ಪತ್ತೆಯಾಗಿದ್ದು, ಒಟ್ಟು 16 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಆ ಕುರಿತು ಸಮಗ್ರ ಮಾಹಿತಿಯನ್ನು ರಾಘವೇಂದ್ರ ಹೆಗಡೆ ಅವರ ತಂಡವು ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಕಾರ್ಯಾಚರಣೆ ಕೈಗೊಂಡ ಸಿಬ್ಬಂದಿಗಳೂ ಸೇರಿದಂತೆ ಪೋಲಿಸ್ ಇಲಾಖೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆಯುವುದಲ್ಲದೇ ಅಕ್ರಮದ ಸ್ಥಳಗಳ ಕುರಿತೂ ಸಹ ತನಿಖೆ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪೋಲಿಸರಿಗೆ ಢವಢವ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭಗೊಂಡಿರುವುದರಿಂದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಪರಾರಿಗೆ ಸಹಕರಿಸಿದರು ಎಂಬ ಹಿನ್ನೆಲೆಯಲ್ಲಿ ಪೋಲಿಸ್ ಅಧಿಕಾರಿಗಳಲ್ಲಿ ನಡುಕು ಹುಟ್ಟಿಸುವಂತಾಗಿದೆ.
ಪರೀಕ್ಷಾ ಅಕ್ರಮ ಪ್ರಕರಣ ದಾಖಲಾಗುತ್ತಿದ್ದಂತೆಯೇ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ವಿರುದ್ಧ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಅಶೋಕನಗರ ಪೋಲಿಸ್ ಠಾಣೆಗಳಲ್ಲಿ ಹಾಗೂ ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆದಾಗ್ಯೂ, ಪ್ರಮುಖ ಆರೋಪಿಯನ್ನು ಹಿಡಿಯಲು ಆಗಲಿಲ್ಲ. ಪ್ರಮುಖ ಆರೋಪಿ ಮನೆಯಲ್ಲಿಯೇ ಇದ್ದರೂ ಸಹ ಪೋಲಿಸರು ನಿರ್ಲಕ್ಷ್ಯ ವಹಿಸಿದರು. ಆದಾಗ್ಯೂ, ಕಳೆದ ಅಕ್ಟೋಬರ್ 28ರಂದು ಬೆಳಿಗ್ಗೆ 10-30ಕ್ಕೆ ಹಿರಿಯ ಪೋಲಿಸ್ ಅಧಿಕಾರಿಗೆ ಆರೋಪಿ ಆರ್.ಡಿ. ಪಾಟೀಲ್ ವರದಾ ಲೇಔಟ್‍ನಲ್ಲಿರುವ ಮಹಾಲಕ್ಷ್ಮೀ ಅಪಾರ್ಟ್‍ಮೆಂಟ್‍ನಲ್ಲಿ ಇರುವ ಕುರಿತು ಮಾಹಿತಿ ಕೊಡಲಾಗಿತ್ತು. ಆದಾಗ್ಯೂ, ತಕ್ಷಣವೇ ಕಾರ್ಯಾಚರಣೆ ಮಾಡಲಿಲ್ಲ. ಬದಲಾಗಿ ಮಧ್ಯಾಹ್ನ 3 ಗಂಟೆಗೆ ದಾಳಿ ಮಾಡುವ ಸಂದರ್ಭದಲ್ಲಿಯೇ ಆರ್.ಡಿ. ಪಾಟೀಲ್ ಅಪಾರ್ಟ್‍ಮೆಂಟ್ ಹಿಂಬದಿಯಿಂದ ಜಿಗಿದು ಪರಾರಿಯಾಗಿದ್ದ. ಆತನಿಗೆ ಪೋಲಿಸ್ ಅಧಿಕಾರಿಗಳೇ ಮಾಹಿತಿ ಕೊಟ್ಟಿದ್ದರಿಂದ ಆತ ಪರಾರಿಯಾಗಿದ್ದಾನೆ ಎಂಬ ದೂರುಗಳು ವ್ಯಕ್ತವಾಗಿವೆ. ಪೋಲಿಸ್ ಅಧಿಕಾರಿಗಳು ಅಪಾರ್ಟ್‍ಮೆಂಟ್‍ಗೆ ಬರುವ ವಿಚಾರವನ್ನು ಆರೋಪಿಯ ವಾಟ್ಸಪ್‍ಗೆ ಮಾಹಿತಿ ಕೊಟ್ಟರು ಎನ್ನಲಾಗಿದೆ. ಅದರಲ್ಲಿಯೂ ನೆಲೋಗಿಯಿಂದಲೂ ಅಂತಹ ಮಾಹಿತಿ ಬಂದಿದೆ ಎಂದು ಗೊತ್ತಾಗಿದೆ. ಹೀಗಾಗಿ ಕಳಂಕಿತ ಪೋಲಿಸ್ ಅಧಿಕಾರಿಗಳು ಸಂಕಷ್ಟಕ್ಕೆ ಒಳಗಾಗುವಂತೆ ಆಗಿದೆ.
ಪರೀಕ್ಷಾ ಅಕ್ರಮದಲ್ಲಿ ಸುಮಾರು 300ಕ್ಕಿಂತಲೂ ಹೆಚ್ಚು ಬ್ಲೂಟೂತ್ ಡಿವೈಸ್‍ಗಳನ್ನು ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಒಂದೊಮ್ಮೆ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಜಾಮರ್ ಅಳವಡಿಸಿದರೆ ಬ್ಲೂಟೂತ್ ಡಿವೈಸ್‍ಗಳು ಕಾರ್ಯನಿರ್ವಹಿಸದೇ ಹೋದಲ್ಲಿ ವಾಕಿಟಾಕಿ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು ಎನ್ನಲಾಗಿದೆ. ಹೀಗಾಗಿ ಎಲ್ಲ ಆಯಾಮಗಳ ಮೂಲಕ ಸಿಐಡಿ ತಂಡವು ತನಿಖೆ ಕೈಗೊಳ್ಳಲಿದೆ.
ಅದೂ ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕುರಿತು ಅನುಮಾನವಿದೆ. ಆ ಕುರಿತು ಈಗಾಗಲೇ ವಾಟ್ಸಪ್‍ನಲ್ಲಿ ಹರಿದಾಡುತ್ತಿದ್ದು, ಅಫಜಲಪುರ ತಾಲ್ಲೂಕಿನ ರಾಯಲ್ ಪಬ್ಲಿಕ್ ಶಾಲೆಯಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಕುರಿತು ಅನುಮಾನಗಳು ಹುಟ್ಟಿಕೊಂಡಿವೆ. ಹೀಗಾಗಿ ಅಕ್ರಮಗಳ ಕುರಿತು ಸಮಗ್ರ ತನಿಖೆಯನ್ನು ಸಿಐಡಿ ತಂಡವು ಆರಂಭಿಸಿದ್ದು, ಕಳಂಕಿತ ಪೋಲಿಸ್ ಅಧಿಕಾರಿಗಳಿಗೆ ನಡುಕ ಹುಟ್ಟಿಸುವಂತಾಗಿದೆ.