ಕಲಬುರಗಿಗೆ ರಾಹುಲ್‍ಗಾಂಧಿ:ಏ. 28ರಂದು ಜೇವರ್ಗಿಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿ

ಕಲಬುರಗಿ,ಏ.26: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಲು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಗುರುವಾರ ಏಪ್ರಿಲ್ 27ರಂದು ಸಂಜೆ ನಗರಕ್ಕೆ ಆಗಮಿಸುವರು. ನಂತರ ಜೇವರ್ಗಿಯಲ್ಲಿ ಏಪ್ರಿಲ್ 28ರಂದು ಶುಕ್ರವಾರ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಎಐಸಿಸಿ ಕಾರ್ಯದರ್ಶಿಗಳು, ಮಾಜಿ ಸಚಿವರೂ ಆದ ಶಾಸಕ ಶ್ರೀಧರ್ ಬಾಬು ಅವರು ಹೇಳಿದರು.
ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇವರ್ಗಿ ಪಟ್ಟಣದಲ್ಲಿ ಏಪ್ರಿಲ್ 28ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜರುಗಲಿರುವ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ರಾಹುಲ್‍ಗಾಂಧಿ ಅವರು ಪಾಲ್ಗೊಳ್ಳುವರು ಎಂದರು.
ಜೇವರ್ಗಿ ಪಟ್ಟಣದಲ್ಲಿನ ಎನ್. ಧರ್ಮಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೂ ಸೇರಿದಂತೆ ಅನೇಕ ನಾಯಕರು ಆಗಮಿಸುವರು ಎಂದುಅ ವರು ತಿಳಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಶೇಕಡಾ 40ರಷ್ಟು ಕಮೀಷನ್ ಸರ್ಕಾರವಾಗಿದೆ. ಅಲ್ಲದೇ ಬೆಲೆ ಏರಿಕೆ, ಭ್ರಷ್ಟಾಚಾರ ಮಿತಿಮೀರಿದ್ದು, ಕರ್ನಾಟಕದಲ್ಲಿ ಬಿಜೆಪಿಯ ಆಡಳಿತ ವಿರೋಧಿ ಅಲೆ ಇದೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಅಲೆ ಇದ್ದು, ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ರಾಜಗೋಪಾಲರೆಡ್ಡಿ ಮುದಿರಾಜ್, ಮಾಜಿ ಮೇಯರ್ ಶರಣಕುಮಾರ್ ಮೋದಿ, ಶ್ಯಾಮ್ ನಾಟೀಕಾರ್, ಈರಣ್ಣ ಝಳಕಿ ಮುಂತಾದವರು ಉಪಸ್ಥಿತರಿದ್ದರು.