ಕಲಬುರಗಿ:ಕೋವಿಡ್ ಸೋಂಕಿತರು, ಸಾವಿನ ಸಂಖ್ಯೆ ಇಳಿಮುಖ

ಕಲಬುರಗಿ,ಮೇ.31-ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕೋವಿಡ್ ಸೋಂಕಿತರು ಮತ್ತು ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಕಂಡುಬಂದಿದೆ.
ಮೇ.24 ರಿಂದ ಮೇ.30ರವರೆಗಿನ ಅಂಕಿ ಅಂಶಗಳನ್ನು ಗಮನಸಿದರೆ ಕೋವಿಡ್ ಸೋಂಕಿತರು ಮತ್ತು ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಕಡಿಮೆಯಾಗಿದೆ. ಈ ನಡುವೆ ಸೋಂಕಿತರಿಗಿಂತ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಮೇ.24 ರಂದು 245 ಜನರಿಗೆ ಸೋಂಕು ದೃಢಪಟ್ಟಿತ್ತು. 9 ಜನರು ಸಾವನ್ನಪ್ಪಿದ್ದರು. 25 ರಂದು 165 ಜನರಿಗೆ ಸೋಂಕು ದೃಢಪಟ್ಟು, 11 ಜನ ಸಾವನ್ನಪ್ಪಿದ್ದರು. 26 ರಂದು 175 ಜನರಿಗೆ ಸೋಂಕು ದೃಢಪಟ್ಟು 9 ಜನ ಸಾವನ್ನಪ್ಪಿದ್ದರು. 27 ರಂದು 153 ಜನರಿಗೆ ಸೋಂಕು ದೃಢಪಟ್ಟು, 5 ಜನ ಸಾವನ್ನಪ್ಪಿದ್ದರು. 28 ರಂದು 91 ಜನರಿಗೆ ಸೋಂಕು ದೃಢಪಟ್ಟು 5 ಜನ ಸಾವನ್ನಪ್ಪಿದ್ದರು. 29 ರಂದು 107 ಜನರಿಗೆ ಸೋಂಕು ದೃಢಪಟ್ಟು 3 ಜನ ಸಾವನ್ನಪ್ಪಿದ್ದರು. 30 ರಂದು 107 ಜನರಿಗೆ ಸೋಂಕು ದೃಢಪಟ್ಟು, 4 ಜನ ಸಾವನ್ನಪ್ಪಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಏರುಗತಿಯಲ್ಲಿದ್ದ ಕೋವಿಡ್ ಸೋಂಕಿತರು, ಸಾವನ್ನಪ್ಪುತ್ತಿದ್ದವರ ಸಂಖ್ಯೆ ಮೇ. ಕೊನೆಯವಾರದಷ್ಟೊತ್ತಿಗೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರ ಹಿಂದೆ ಲಾಕ್ ಡೌನ್ ಮತ್ತು ಸಂಪೂರ್ಣ ಲಾಕ್ ಡೌನ್ ಕೆಲಸ ಮಾಡಿದೆ. ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಕಂಡು ಸರ್ಕಾರ ಈ ಮೊದಲು ಮೇ.24ರವರೆಗೆ ಲಾಕ್ ಡೌನ್ ಘೋಷಣೆ ಮಾಡಿತ್ತು. ಸೋಂಕು ನಿಯಂತ್ರಣಕ್ಕೆ ಬಾರದೇ ಇದ್ದುದ್ದರಿಂದ ಅದನ್ನು ಜೂ.7ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು. ಈ ಮಧ್ಯೆ ಜಿಲ್ಲಾಧಿಕಾರಿಗಳು ಮೇ.20 ರಿಂದ 23 ರವರೆಗೆ ಮೂರುದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದ್ದರೂ. ಇದಾದ ನಂತರ ಮತ್ತೆ ಅಂದರೆ ಮೇ.27 ರಿಂದ 31ರ ಬೆಳಿಗ್ಗೆ 6 ಗಂಟೆಯವರೆಗೆ ನಾಲ್ಕುದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು. ಲಾಕ್ ಡೌನ್ ಮತ್ತು ಸಂಪೂರ್ಣ ಲಾಕ್ ಡೌನ್ ಪರಿಣಾಮವಾಗಿ ಜನರ ಓಡಾಟ ಕಡಿಮೆಯಾದುದ್ದರಿಂದ ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸಲು ಸಹಕಾರಿಯಾಗಿದೆ ಎನ್ನಲಾಗುತ್ತಿದ್ದು, ಸದ್ಯ ಸೋಂಕು ಹತೋಟಿಗೆ ಬಂದಿದ್ದರೂ ಇದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಸರ್ಕಾರ ಮತ್ತು ಜಿಲ್ಲಾಡಳಿತ ಮುಂದೆ ಯಾವೊಂದು ಕ್ರಮಗಳನ್ನು ಕೈಗೊಳ್ಳುತ್ತವೆ ಎಂಬುವುದನ್ನು ಕಾದು ನೋಡಬೇಕಾಗಿದೆ.