ಕಲಬುರಗಿ:ಕೃಷಿ ಚಟುವಟಿಕೆ ಚುರುಕು

ಕಲಬುರಗಿ,ಜೂ.7-ಜಿಲ್ಲೆಯ ಬಹುತೇಕ ಕಡೆ ರೈತರು ಮುಂಗಾರು ಬಿತ್ತನೆ ಕಾರ್ಯಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಸೇರಿದಂತೆ ಕೃಷಿ ಪರಿಕರ ಮತ್ತು ಯಂತ್ರೋಪಕರಣ ಖರೀದಿ ಜೋರಾಗಿ ನಡೆದಿದೆ.
ನಗರದ ಕೃಷಿಪರಿಕರಗಳ ಮಾರಾಟಗಳ ಅಂಗಡಿಗಳಲ್ಲಿ ರೈತರು ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡುಬಂತು.
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ಜೂ.14ರ ಬೆಳಿಗ್ಗೆ 6 ಗಂಟೆಯವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದ್ದರೂ ಈ ಅವಧಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ರವಿವಾರ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೈತರು ಇಂದು ಬೆಳಿಗ್ಗೆಯಿಂದಲೇ ಕೃಷಿ ಪರಿಕರಗಳ ಖರೀದಿಗಾಗಿ ನಗರಕ್ಕೆ ಆಗಮಿಸಿದ್ದರು. ನಗರದ ಸೂಪರ್ ಮಾರ್ಕೆಟ್ ಸೇರಿದಂತೆ ಬಹುತೇಕ ಕಡೆ ಕೃಷಿಪರಿರಕರಗಳ ಖರೀದಿ ಜೋರಾಗಿಯೇ ನಡೆದಿತ್ತು.
ಕೆಲವು ಕಡೆ ರೈತರು ಈಗಾಗಲೇ ಬಿತ್ತನೆಕಾರ್ಯ ಆರಂಭಿಸಿದ್ದು, ಇನ್ನು ಕೆಲವು ಕಡೆ ರೈತರು ಭೂಮಿ ಸಂಪೂರ್ಣ ಹದವಾಗಲು ಇನ್ನೊಂದು ಮಳೆಗಾಗಿ ಕಾಯುತ್ತಿದ್ದಾರೆ.