ಕಲಘಟಗಿ ಪ.ಪಂ.ಬಿಜೆಪಿ ತೆಕ್ಕೆಗೆ

ಕಲಘಟಗಿ,ನ7- ಕಲಘಟಗಿ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅನಸೂಯಾ ಹೆಬ್ಬಳ್ಳಿಮಠ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಯಲ್ಲವ್ವ ಶಿಗ್ಲಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ವಿಜೇತರು ಶಾಸಕರ ಮತ ಸೇರಿ 13 ಮತಗಳನ್ನು ಪಡೆದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎಂ.ನಿಂಬಣ್ಣವರ ಪಟ್ಟಣದಲ್ಲಿ ಹಲವಾರು ಸಮಸ್ಯೆಗಳಿವೆ. ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಚುನಾಯಿತ ಪ್ರತಿನಿಧಿಗಳು ಪಕ್ಷದ ಗೌರವ ಹಾಗೂ ಮತದಾರರ ಆಸೆ-ಆಕಾಂಕ್ಷೆಗಳನ್ನು ಈಡೇರಿಸಲು ತಮ್ಮ ಶಕ್ತಿ ಮೀರಿ ಶ್ರಮಿಸುವರು. ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿರುವ ಅಭಿವೃದ್ಧಿಯ ಪರ್ವವನ್ನು ಕಾಣಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಶೆರೇವಾಡ, ತಾಲೂಕು ಪಂಚಾಯತಿ ಅಧ್ಯಕ್ಷೆ ಸುನಿತಾ ಮ್ಯಾಗಿನಮನಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ವಿಜಯಲಕ್ಷ್ಮಿ ಆಡಿನವರ, ನರೇಶ ಮಲೆನಾಡು, ಮಂಜುಳಾ ನಾಯಕ, ಪರಶುರಾಮ, ಸೋಮು ಕೊಪ್ಪದ, ಸದಾನಂದ ಚಿಂತಾಮಣಿ, ಬಿ.ಟಿ.ಅಳಗವಾಡಿ, ನಿಂಗಪ್ಪ ಸುತಗಟ್ಟಿ, ರಾಕೇಶ ಅಳಗವಾಡಿ, ಪ್ರಮೋದ ಪಾಲ್ಕರ್, ಇದ್ದರು. ಚುನಾವಣಾಧಿಕಾರಿ ಅಶೋಕ ಶಿಗ್ಗಾವಿ, ಕಾರ್ಯನಿರ್ವಹಿಸಿದರು. ಪ.ಪಂ.ಮುಖ್ಯಾಧಿಕಾರಿ ಚಂದ್ರಶೇಖರ ಇದ್ದರು. ಪೋಲಿಸ್ ಇನ್ಸಪೆಕ್ಟರ್ ವಿಜಯ ಬಿರಾದಾರ ಸೂಕ್ತ ಪೋಲಿಸ್ ಬಂದೋಬಸ್ತ ಒದಗಿಸಿದ್ದರು.