ಕಲಕೋರಾ ಸರ್ಕಾರಿ ಶಾಲೆಯಲ್ಲಿ ಪೂರ್ವಭಾವಿ ಸಭೆ

ಬೀದರ.ಮಾ.28: ಅತೀ ಕಡಿಮೆ ಮತದಾನ ನಡೆಯುವ ಮತ್ತು ಅತೀಸ್ಮೂಕ್ಷ್ಮ ಮತಗಟ್ಟೆ ಎಂದು ಗುರುತಿಸಿದ ಮುಡುಬಿ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 643 ಮತದಾರರು ಇರುವ ಕಲಕೋರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 260ರಲ್ಲಿ ಮತ್ತು ಬಸವಕಲ್ಯಾಣ ಸಿಟಿನಲ್ಲಿ ಅತೀಸ್ಮೂಕ್ಷ್ಮ ಮತಗಟ್ಟೆ ಎಂದು ಗುರುತಿಸಿರುವ 567 ಮತದಾರರು ಇರುವ ಧರಮಪ್ರಕಾಶ ಗಲ್ಲಿಯ ಮತಗಟ್ಟೆ ಸಂಖ್ಯೆ 89ರಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಸಭೆ ಕೂಡ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಒಟ್ಟು ಸೂಕ್ಷ್ಮ 100, ಅತೀ ಸೂಕ್ಷ್ಮ 64 ಮತ್ತು ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗುವ 2 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಪ್ರಜಾಪ್ರಭುತ್ವ ಬಲಪಡಿಸಲು ನಾವುಗಳು ತಪ್ಪದೇ ಮತದಾನ ಮಾಡಬೇಕು. ಅರ್ಹ ಎಲ್ಲರೂ ಮತದಾನ ಮಾಡುವುದು ಸಂವಿಧಾನ ಬದ್ಧ ಕರ್ತವ್ಯವಾಗಿದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ಗ್ರಾಮಸ್ಥರಲ್ಲಿ ವಿನಂತಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹಿರಾ ನಸಿಮ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಪ್ಪದೇ ಮಾತದಾನ ಮಾಡಬೇಕು. ಮತದಾನ ಮಾಡಲು ಮಹಿಳೆಯರು ಹಿಂಜರಿಯಬಾರದು. ಮತಗಟ್ಟೆಗಳಲ್ಲಿ ಕಲ್ಪಿಸಿರುವ ಅನುಕೂಲತೆ ಬಳಸಿಕೊಂಡು ವಿಕಲಚೇತನರು ಕೂಡ ಮತದಾನ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನದ ಮಹತ್ವ ಮತ್ತು ಮತ ಯಂತ್ರಗಳ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ.ಡಿ.ಎಲ್ ಮಾತನಾಡಿ, ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಪ್ರತಿಯೊಬ್ಬರು ನಿರ್ಭಿಡೆಯಿಂದ ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲ ರೀತಿಯ ಪೊಲೀಸ್ ಬಂದೋಬಸ್ತ್‍ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ನಾಗಯ್ಯ ಹಿರೇಮಠ, ಜಿಲ್ಲಾ ಚುನಾವಣಾ ಮಾಸ್ಟರ್ ಟ್ರೇನರ್ ಡಾ.ಗೌತಮ ಅರಳಿ ಹಾಗೂ ಇನ್ನೀತರರು ಇದ್ದರು.