ಕಲಕೇರಿಯಿಂದ ಹುಣಸಿಕುಮರಿ ಗ್ರಾಮ ಸಂಪರ್ಕ ರಸ್ತೆಗೆ ಭೂಮಿ ಪೂಜೆ

ಧಾರವಾಡ,ಏ2:ಹುಣಸಿಕುಮರಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಕಲಕೇರಿಯಿಂದ ಹುಣಸಿಕುಮರಿಗೆ ಪಕ್ಕಾರಸ್ತೆ ನಿರ್ಮಾಣಕ್ಕೆ ಇಂದು ಮಧ್ಯಾಹ್ನ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೂಮಿಪೂಜೆ ನೆರವೇರಿಸಿದರು.

ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮವಾಸ್ತವ್ಯ ಹಾಗೂ ಪ್ರತಿವಾರದ ಒಂದು ದಿನ ಹಮ್ಮಿಕೊಳ್ಳುವ ಗ್ರಾಮಗಳ ಭೇಟಿ ಕಾರ್ಯಕ್ರಮದಲ್ಲಿ ಹುಣಸಿಕುಮರಿ ಗ್ರಾಮಸ್ಥರಿಂದ ತಹಶೀಲ್ದಾರ ಸಂತೋಷಕುಮಾರ್ ಅವರ ಮೂಲಕ ಸಲ್ಲಿಕೆಯಾಗಿದ್ದ ಹುಣಸಿಕುಮರಿ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಸಮಸ್ಯೆ ಬಗೆಹರಿಸಿ, ಪಕ್ಕಾ ರಸ್ತೆಯನ್ನು ನಿರ್ಮಿಸಿಕೊಡುವ ಬೇಡಿಕೆಯನ್ನು ಜಿಲ್ಲಾಧಿಕಾರಿಗಳು ಈಡೇರಿಸಿದ್ದಾರೆ. 

ಸುಮಾರು 40 ವರ್ಷಗಳಿಂದ ಅರಣ್ಯ ಇಲಾಖೆಯ ತಕರಾರಿನಿಂದ ಸಮಸ್ಯೆಯಾಗಿ ಉಳಿದಿದ್ದ ಈ ರಸ್ತೆ ಕಾಮಗಾರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಜರುಗಿಸಿ ಪರಿಹಾರ ಕಂಡುಕೊಳ್ಳಲಾಗಿದೆ. ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಒಪ್ಪಿಗೆ ನೀಡಿದ ತಕ್ಷಣ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಭೂದಾಖಲೆಗಳ ಉಪನಿರ್ದೇಶಕ ವಿಜಯಕುಮಾರ್ ಎ.ಪಿ. ಅವರಿಗೆ, ತಕ್ಷಣ ರಸ್ತೆ ಸಮೀಕ್ಷೆ ಮಾಡಿ ವರದಿ ನೀಡಲು ನಿರ್ದೇಶಿಸಿದರು. ಇದೇ ಸಂದರ್ಭದಲ್ಲಿ ಕಲಘಟಗಿ ಕ್ಷೇತ್ರದ ಶಾಸಕರಾದ ಸಿ.ಎಂ. ನಿಬಂಣ್ಣವರ ಅವರ ವಿಶೇಷ ಪ್ರಯತ್ನದಿಂದ ಈ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. 

ಲೋಕೋಪಯೋಗಿ ಇಲಾಖೆಯ ಸುಮಾರು 460 ಲಕ್ಷ ರೂ.ಗಳ ಅನುದಾನದಲ್ಲಿ ಕಲಕೇರಿಯಿಂದ ಹುಣಸಿಕುಮರಿ ಗ್ರಾಮಕ್ಕೆ ಸಂಪರ್ಕಿಸುವ ಸುಮಾರು 5 ಕಿ.ಮೀ. ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗೆ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೂಮಿಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ  ಎಸ್.ಬಿ. ಚೌಡನ್ನವರ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಎನ್. ಪಾಟೀಲ, ತಹಶೀಲ್ದಾರ ಡಾ: ಸಂತೋಷ ಬಿರಾದಾರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಕಲಕೇರಿ ಗ್ರಾಮಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಕಲಕೇರಿ, ಹುಣಸಿಕುಮರಿ ಗ್ರಾಮಸ್ಥರು ಭಾಗವಹಿಸದ್ದರು. 

ಬಹುದಿನಗಳ ಬೇಡಿಕೆ ಈಡೇರಿಸಿದ ಶಾಸಕ ಸಿ.ಎಂ. ನಿಂಬಣ್ಣವರ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರನ್ನು ಹುಣಸಿಕುಮರಿ ಗ್ರಾಮಸ್ಥರು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.