ಕರ ಬಾಕಿ ಹಿನ್ನೆಲೆ:ಆಸ್ತಿ ಜಪ್ತಿಗೆ ಮುಂದಾದ ಪಾಲಿಕೆ, ಸ್ಥಳದಲ್ಲಿಯೇ 10 ಲಕ್ಷ ರೂ. ಕರ ಪಾವತಿ

ಕಲಬುರಗಿ,ಮಾ.4: ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ ಪಾವತಿಸಿದೇ ಬಾಕಿ ಉಳಿಸಿಕೊಂಡಿದ್ದ ಫ್ಲ್ಯಾಟ್, ವಾಣಿಜ್ಯ ಕಟ್ಟಡ, ಕೈಗಾರಿಕೆ ಪ್ರದೇಶಗಳ ಮಾಲೀಕರ ಆಸ್ತಿ ಪ್ರದೇಶಗಳೀಗೆ ಶನಿವಾರ ಪಾಲಿಕೆ ಅಧಿಕಾರಿಗಳು ದಿಢೀರ ಭೇಟಿ ನೀಡಿ ಆಸ್ತಿ ಜಪ್ತಿಗೆ ಮುಂದಾದಾಗ ಸ್ಥಳದಲ್ಲಿಯೇ 5 ಜನ ಆಸ್ತಿದಾರರಿಂದ 10 ಲಕ್ಷ ರೂ. ಪಾಲಿಕೆಗೆ ಕರ ಪಾವತಿಸಲಾಗಿದೆ.
ಹಲವಾರು ವರ್ಷಗಳಿಂದ ಬಾಕಿ ಕರ ಉಳಿಸಿಕೊಂಡಿದ್ದಕ್ಕಾಗಿ ಕರ ಪಾವತಿಸುವಂತೆ ನೋಟಿಸ್ ಕಳುಹಿಸಿದರೂ ಇದಕ್ಕೆ ಸ್ಪಂದನೆ ಸಿಗದ ಕಾರಣ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ನಿರ್ದೇಶನದ ಮೇರೆಗೆ ವಲಯ-1ರ ಆಯುಕ್ತ ಮದನಿಕಾಂತ ನೇತೃತ್ವದ ಪಾಲಿಕೆ ಅಧಿಕಾರಿಗಳ ತಂಡ ಜನವಸತಿ ಫ್ಲ್ಯಾಟ್, ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿತು.
ಮಾರ್ಚ್ ಮಾಹೆ ಸಂಪೂರ್ಣವಾಗಿ ಕರ ಸಂಗ್ರಹಣೆಗೆ ಆಂದೋಲನ ಹಮ್ಮಿಕೊಂಡಿದ್ದು, ಪಾಲಿಕೆಗೆ ಕರ ಪಾವತಿಸದೆ ಬಾಕಿ ಉಳಿಸಿಕೊಂಡಂತಹ ಆಸ್ತಿ ಮಾಲೀಕರಿಗೆ ಕೆ.ಎಂ.ಸಿ ಕಾಯ್ದೆ-1976ರ ಶೆಡ್ಯೂಲ್-3ರ ಟ್ಯಾಕ್ಸೇಶನ್ ನಿಯಮಗಳ ಪ್ರಕಾರ ಜಪ್ತಿ ವಾರಂಟ್ ಜಾರಿ ಮಾಡಿ ಆಸ್ತಿ ತೆರಿಗೆ ವಸೂಲಿ ಮಾಡಲಾಗುವುದು ಎಂದಿದ್ದಾರೆ.
ಹೀಗಾಗಿ ಮಹಾನಗರದ ಆಸ್ತಿದಾರರು ಇದಕ್ಕೆ ಆಸ್ಪದ ನೀಡದೆ ಬಾಕಿ ಇರುವ ಆಸ್ತಿ ಕರವನ್ನು ಶೀಘ್ರವಾಗಿ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ವಲಯ ಆಯುಕ್ತರು ಮನವಿ ಮಾಡಿದ್ದಾರೆ. ಕಂದಾಯ ಅಧಿಕಾರಿ ಪ್ರಹ್ಲಾದ ಕುಲಕರ್ಣಿ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ತಂಡದಲ್ಲಿದ್ದರು.