ಕರ್ಮವಷ್ಟೇ ಅಧಿಕಾರ, ಫಲಾಫಲ ಭಗವಂತನದ್ದು:ರಘುವಿಜಯತೀರ್ಥರು

ಕಲಬುರಗಿ,ಮಾ 4: ಸಕಲ ಜೀವರಾಶಿಯನ್ನು ಸೃಷ್ಟಿಸಿದ ಭಗವಂತ ಪ್ರವೃತ್ತಿ ಅಂದರೆ ನಾವು ಮಾಡುವ ಕಾರ್ಯ ಮತ್ತು ಪ್ರತಿಯನ್ನು, ಜ್ಞಾನ ,ಧರ್ಮ ಕಾರ್ಯ ಮಾಡುವಷ್ಟೇ ಮಾನವನ ಅಧಿಕಾರ. ಫಲಾಫಲ ಭಗವಂತನ ಅಧೀನದಲ್ಲಿದೆ. ನಾವು ಮಾಡುವ ಸಕಲ ಕರ್ಮಗಳನ್ನು ಭಗವಂತನಿಗೆ ಸಮರ್ಪಣೆ ಮಾಡಬೇಕು. ಸಾವು ದುಃಖಕ್ಕೆ ಕಾರಣವಲ್ಲ. ವ್ಯಾಮೋಹ, ನಾನು ನನ್ನದು ಎಂಬ ಅಭಿಮಾನ ದುಃಖಕ್ಕೆ ಕಾರಣ. ಆದ್ದರಿಂದ ವ್ಯಾಮೋಹ, ಅಭಿಮಾನವನ್ನು ತ್ಯಾಗ ಮಾಡಿ ಕರ್ಮಗಳನ್ನು ಮಾಡುವುದರ ಕಡೆಗೆ ಕಾರ್ಯೋನ್ಮುಖರಾಗೋಣ, ಆತ್ಮಭಿವೃದ್ಧಿ ಹೊಂದಿ ಮೋಕ್ಷದಡೆಗೆ ಸಾಗೋಣ ಎಂದು ಶ್ರೀ ಕೃಷ್ಣ ಪರಮಾತ್ಮ ಗೀತೆಯ ಮೂಲಕ ನಮ್ಮೆಲ್ಲರಿಗೂ ಉಪದೇಶಿಸಿದ್ದಾರೆ ಎಂದು ಫಾಲ್ಗುಣ ಏಕಾದಶಿ ನಿಮಿತ್ಯ ಜಯತೀರ್ಥ ಬಡಾವಣೆಯಲ್ಲಿ ಗೀತಾ ಪಾರಾಯಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಮದ್ಭಗವದ್ಗೀತಾ ಪಾರಾಯಣದ ನಂತರ ಕೂಡಲೀ ಆರ್ಯ ಅಕ್ಷೋಭ್ಯತೀರ್ಥ ಮಠದ ರಘುವಿಜಯತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶವನ್ನು ನೀಡಿದರು.
ಶ್ರೀ ಕೃಷ್ಣ ಪರಮಾತ್ಮನು ಗೀತೆಯಲ್ಲಿ ಎಲ್ಲವನ್ನು ತಿಳಿಸಿದ್ದಾನೆ. ಜಗತ್ತಿನಲ್ಲಿರುವುದೆಲ್ಲವೂ ಭಗವದ್ಗೀತೆಯಲ್ಲಿದೆ. ಶ್ರೀಮದ್ ಭಗವದ್ಗೀತಾ ಸರ್ವಶಾಸ್ತ್ರಗಳ ಸಾರ. ಭಗವದ್ಗೀತೆಯನ್ನು ಸಮಗ್ರವಾಗಿ ಅರ್ಥೈಸಿಕೊಂಡು ಪಠಣ ಮತ್ತು ಪಾರಾಯಣ ಮಾಡುವುದರಿಂದ ಸಕಲ ಶಾಸ್ತ್ರಗಳನ್ನು ಅಭ್ಯಾಸ ಮಾಡಿದ ಫಲ ಪ್ರಾಪ್ತವಾಗುತ್ತದೆ ಎಂದು ಸಾಕ್ಷಾತ್ ಭಗವಂತನೇ ಹೇಳಿದ್ದಾರೆ. ಭಗವಂತನು ಭಗವದ್ಗೀತೆ ಅಮೃತವನ್ನು ವೇದಗಳ ಸಾರವನ್ನಾಗಿ ನಮಗೆಲ್ಲಾ ನೀಡಿದ್ದಾನೆ ಅದನ್ನು ನಾವು ಪಾನ ಮಾಡಬೇಕು ಎಂದರು.
ಉತ್ತರಾದಿ ಮಠದ ಮಠಾಧಿಕಾರಿಗಳಾದ ಪಂಡಿತ ರಾಮಾಚಾರ್ಯ ಘಂಟಿ,ಪಂಡಿತ ಹನುಮಂತ ಆಚಾರ್ಯ ಸರಡಗಿ, ಪಾರಾಯಣ ಸಂಘಗಳ ಸಂಚಾಲಕರಾದ ರವಿ ಲಾತೂರಕರ, ಹೆಚ್ ವಿ ಕುಲಕರ್ಣಿ. ಎನ್ ವಿ ಕುಲಕರ್ಣಿ , ರಾಮಾಚಾರ್ಯ ನಗನೂರ,ವಿಜಯಕುಮಾರ ಕುಲಕರ್ಣಿ, ಪದ್ಮನಾಭಾಚಾರ್ಯ ಜೋಶಿ, ಸುರೇಶ್ ಕುಲಕರ್ಣಿ, ಅನಿಲ್ ಕುಲಕರ್ಣಿ, ವಿನುತ ಜೋಶಿ, ಪ್ರಮುಖರಾದ ಬಾಲಕೃಷ್ಣ ಲಾತೂರಕರ್,ಅನಂತ ಕಾಮೇಗಾಂವಕರ, ಜಗನ್ನಾಥಾಚಾರ್ಯ ಸಗರ್ ಸೇರಿದಂತೆ ಗೀತಾ ಪಾರಾಯಣ ಸಂಘದ ಸದಸ್ಯರು ಭಕ್ತರು ಮಹಿಳೆಯರು ಉಪಸ್ಥಿತರಿದ್ದರು.