ಕರ್ಮಯೋಗಿ ಸಿದ್ದರಾಮೇಶ್ವರರು ಸಮಾಜಕ್ಕೆ ಆದರ್ಶರು : ಜುಮ್ಮಾ

ಔರಾದ : ಜ.15:ಶಿವಶರಣ ಶ್ರೇಷ್ಠರಲ್ಲಿ ಒಬ್ಬರಾಗಿದ್ದ ಸಿದ್ದರಾಮೇಶ್ವರರು ಕರ್ಮಯೋಗದಿಂದ ಪ್ರಸಿದ್ಧಿ ಪಡೆದ ಮಹಾಪುರುಷರಾಗಿದ್ದಾರೆ’ ಕರ್ಮಯೋಗಿ ಶಿವಯೋಗಿ ಸಿದ್ಧರಾಮೇಶ್ವರರು ಸಮಾಜಕ್ಕೆ ಆದರ್ಶರು ಹಾಗೂ ಸಮಾಜ ಉದ್ಧಾರಕ್ಕೆ ಶ್ರಮಿಸಿದವರು ಎಂದು ತಾಲೂಕ ಜನಪದ ಪರಿಷತ್ ಅಧ್ಯಕ್ಷ ಸಂಜುಕುಮಾರ ಜುಮ್ಮಾ ಅವರು ಹೇಳಿದರು.

ತಾಲ್ಲೂಕಿನ ಸಂತಪೂರನ ಶ್ರೀ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಹಾಗೂ ಇಷ್ಟಲಿಂಗ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದ ಶರಣರಲ್ಲಿ ಕಾಯಕ-ದಾಸೋಹ ಬೆಳೆದುಬಂದಿದ್ದು ಸಮಾಜಕ್ಕೆ ಆದರ್ಶವಾಗಿದೆ, ಸಿದ್ದರಾಮೇಶ್ವರ ಶರಣರು ಹಾಗೂ ಇತರ ಶರಣರು ಮಹಿಳೆಯರ, ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ ಜೊತೆಗೆ ಆಡಂಬರ ಜೀವನ ಮಾಡದೆ, ತಮ್ಮ ಕರ್ಮಯೋಗದ ಮೂಲಕ 12ನೇ ಶತಮಾನದಲ್ಲಿ ಕೇಂದ್ರ ಬಿಂದುವಾಗಿದ್ದ ಸಿದ್ದರಾಮೇಶ್ವರರು ಸತ್ಯನಿಷ್ಠರಾಗಿದ್ದರು. ಕರ್ಮಯೋಗದಿಂದ ಶಿವಯೋಗಕ್ಕೆ ಏರಿದರು. ಸಮಾಜ ಸುಧಾರಣೆ ಸೇವೆಯಲ್ಲಿ ಬದುಕಿನ ಸಿದ್ಧಿ ಕಂಡುಕೊಂಡ ಅವರ ಜೀವನ ಸಾರ್ಥಕತೆಯಿಂದ ಕೂಡಿತ್ತು ಎಂದು ತಿಳಿಸಿದರು.

ಪ್ರಾಂಶುಪಾಲ ನವೀಲಕುಮಾರ್ ಉತ್ಕಾರ್ ಮಾತನಾಡಿ ಸಿದ್ದರಾಮೇಶ್ವರರ ಹೆಸರಿನಲ್ಲಿಯೇ ಒಂದು ಅದ್ಭುತ ಪವಾಡ ಅಡಗಿದೆ, ದೂರದೃಷ್ಟಿ ಹೊಂದಿರುವ ಅವರ ವಚನಗಳು ಇಂದಿಗೂ ಸಮಾಜದ ಕಣ್ಣು ತೆರೆಸುವಂತಿವೆ. ಅವರ ತತ್ವ, ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು, ಸಿದ್ದರಾಮೇಶ್ವರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ “ಸಿದ್ಧರಾಮೇಶ್ವರರ ಜೀವನ ಮತ್ತು ವಚನಕ್ಕೆ ನೀಡಿದ ಕೊಡುಗೆ” ಶಿರ್ಷಿಕೆಯಡಿ ಆಶುಭಾಷಣ ಮಾಡಿದ ವಿದ್ಯಾರ್ಥಿಗಳಾದ ಜ್ಯೋತಿ, ರೇಣುಕಾ, ಆರಾಧನಾ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಡಿಯಾರ ಸಮಾಜ ಅಧ್ಯಕ್ಷ ರಮೇಶ ವಡಿಯಾರ, ಬಸವರಾಜ ಬಿರಾದಾರ, ಧನರಾಜ ಮುಸ್ತಾಪುರ, ಗೌತಮ ಮೇತ್ರೆ, ತುಕಾರಾಮ ಹಸನ್ಮುಖಿ, ಧನರಾಜ ವಡೆಯರ, ಕಾಲೇಜು ಸಿಬ್ಬಂದಿ ಕಲ್ಲಪ್ಪ ಬುಟ್ಟೆ, ಮೀನಾಕ್ಷಿ ಪಾಂಡ್ರೆ, ವನದೇವಿ ಎಕ್ಕಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.