ಭಾಲ್ಕಿ: ಮಾ.27:ಅನಂತ ಜನ್ಮದ ಕರ್ಮಗಳ ಫಲಗಳೇ ನಮ್ಮ ಭವ ಬಂಧನಕ್ಕೆ ಕಾರಣವಾಗಿವೆ ಎಂದು ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠದ ಡಾ| ಶಿವಕುಮಾರ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ತಾಲೂಕಿನ ಚಳಕಾಪುರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ನಡೆಯುತ್ತಿರುವ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು 187ನೇ ಜಯಂತಿ ಮಹೋತ್ಸವ ನಿಮಿತ್ಯ ಆಯೋಜಿಸಿದ್ದ ಧರ್ಮಸಭೆಯ ಎರಡನೇ ದಿನದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮನುಷ್ಯನು ತಾನು ಮಾಡಿದ ಕರ್ಮದ ಫಲವಾಗಿ ಭವ ಬಂಧನಕ್ಕೆ ಒಳಗಾಗುತ್ತಾನೆ. ಒಳ್ಳೆಯದು, ಕೆಟ್ಟದು ಎನ್ನುವ ಯಾವುದಕ್ಕೂ ಅಂಟಿ ಕೊಳ್ಳದೇ ನಿರ್ಲಿಪ್ತವಾದ ಕರ್ಮ ಮಾಡುವುದರಿಂದ ಮುಕ್ತನಾಗಲು ಸಾಧ್ಯ. ಭವ ಬಂಧನದಿಂದ ಮುಕ್ತಿ ಹೊಂದಲು ನಿಜ ದೇವರ ಜ್ಞಾನ ಬೆಳೆಸಿಕೊಳ್ಳಬೇಕು. ದೇವ ಮಾನವನಾದಾಗ ಮಾತ್ರ ಭವ ಪಾಶದಿಂದ ಪಾರಾಗಲು ಸಾಧ್ಯ ಎಂದು ಹೇಳಿದರು.
ಶ್ರೀ ಶಂಕರಾರೂಢ ಸ್ವಾಮೀಜಿ, ಶ್ರೀ ದಯಾನಂದ ಸ್ವಾಮಿಗಳು, ಶ್ರೀ ಅದವೈತಾನಂದ ಸ್ವಾಮಿಗಳು, ಶ್ರೀ ಗಣಪತಿ ಮಹಾರಾಜರು, ಮಾತೋಶ್ರೀ ಲಕ್ಷ್ಮೀದೇವಿತಾಯಿ, ಶ್ರೀ ಜಡಿಸಿದ್ದೇಶ್ವರ ಸ್ವಾಮಿಗಳು, ಶ್ರೀ ಸೋಮೇಶ್ವರಾನಂದ ಸ್ವಾಮಿಗಳು, ಮಾತೋಶ್ರೀ ಸಿದ್ದೇಶ್ವರಿತಾಯಿ, ಮಾತೋಶ್ರೀ ಆನಂದಮಯಿತಾಯಿ, ಮಾತೋಶ್ರೀ ಮನಿಷಾತಾಯಿ, ಮಾತೋಶ್ರೀ ಅಮೃತಾನಂದಮಯಿ, ಶ್ರೀ ಸದ್ರೂಪಾನಂದ ಸ್ವಾಮಿಗಳು, ಶ್ರೀ ಗೋಪಾಲ ಶಾಸ್ತ್ರಿಗಳು, ಶ್ರೀ ಶಿವಾನಂದ ಸ್ವಾಮಿಗಳು, ಭವ ಬಂಧನ ಭವ ಪಾಶ ಬಂದ ಕಾರಣವಿದೇನಯ್ಯ ವಿಷಯ ಕುರಿತು ಪ್ರವಚನ ನೀಡಿದರು. ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ದಾರೂಢ ಮಠ ಚಳಕಾಪೂರದ ಶ್ರೀ ಶಂಕರಾನಂದ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರುಪಾಕ್ಷ ಸ್ವಾಮಿಗಳು, ಯಶವಂತ ಶಾಸ್ತ್ರಿಗಳು, ಶರಣಾನಂದ ಸ್ವಾಮಿಗಳು, ಸಿದ್ದಾರೂಢ ಸಾಧಕು ಉಪಸ್ಥಿತರಿದ್ದರು. ಶರಣಯ್ಯಾ ಸ್ವಾಮಿ, ಯಲ್ಲಾಲಿಂಗ ರೊಟ್ಟೆ, ಬಸವರಾಜ ಹುಲೆಪ್ಪನೋರ ರವರಿಂದ ಸಂಗೀತ ಸೇವೆ ನಡೆಯಿತು. ಹುಬ್ಬಳ್ಳಿಯ ಸಿದ್ಧು ಸಾಧಕರು ಸ್ವಾಗತಿಸಿದರು. ರಮೇಶ ಮಜಕುರಿ ಮತ್ತು ರಮೇಶ ಶ್ರೀಮಂಡಲ ನಿರೂಪಿಸಿದರು. ಪ್ರಭು ಮಾಸಲ್ದಾರ ವಂದಿಸಿದರು.