ಕರ್ಫ್ಯೂ ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ದಂಡ:ಸಿಪಿಐ

ಕಂಪ್ಲಿ,ಏ.22- ಕೊರೋನಾ 2ನೇ ಅಲೆ ಹಿನ್ನೆಲೆ ಸರ್ಕಾರ ಕೈಗೊಂಡಿರುವ ರಾತ್ರಿ ಹಾಗು ವೀಕೆಂಡ್ ಕರ್ಫ್ಯೂ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಸಿಪಿಐ ಸುರೇಶ್ ತಳವಾರ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ಜರುಗಿತು.
ಸಭೆಯಲ್ಲಿ ಸಿಪಿಐ ಸುರೇಶ್ ತಳವಾರ ಮಾತನಾಡಿ, ಸದ್ಯ ಎಲ್ಲೆಡೆ ವೇಗವಾಗಿ ಹರಡುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಏಪ್ರಿಲ್ 21ರಿಂದ ಮೇ.4ರವರೆಗೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಹಾಗು ಶನಿವಾರ, ಭಾನುವಾರ ವಾರಾಂತ್ಯ ಕರ್ಫ್ಯೂವನ್ನು ಸರ್ಕಾರ ಜಾರಿಗೊಳಿಸಿ ಆದೇಶಿಸಿದೆ. ವಾರಾಂತ್ಯ ಕರ್ಫ್ಯೂ ನಿಮಿತ್ತ ಶನಿವಾರ ಮತ್ತು ಭಾನುವಾರಗಳಂದು ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆವರೆಗೂ ಮಾತ್ರ ಜನರಿಗೆ ಅಗತ್ಯ ವಸ್ತು ಖರೀದಿಗೆ ಅವಕಾಶವಿರುತ್ತದೆ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆ ಬಳಿಕ ಸಾರ್ವಜನಿಕರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಜನರು ಮನೆಗಳಲ್ಲಿ ಸುರಕ್ಷಿತವಾಗಿರುವ ಮೂಲಕ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಇನ್ನು ಗ್ರಾಮೀಣ ಭಾಗಗಳಲ್ಲಿ ಬೀಟ್ ಪೊಲೀಸ್ ಪೇದೆಗಳ ಮೂಲಕ ಕೊರೋನಾ ಕರ್ಫ್ಯೂ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸ್ವ-ಇಚ್ಛೆಯಿಂದ ಕೊರೋನಾ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಅದೊಮ್ಮೆ ಕೊರೋನಾ ರೂಲ್ಸ್ ಬ್ರೇಕ್ ಮಾಡುವ ಜನರಿಗೆ ದಂಡ ವಿಧಿಸುವುದರ ಜೊತೆಗೆ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಪಿಎಸ್‍ಐ ವಿರೂಪಾಕ್ಷಪ್ಪ, ಅಪರಾಧ ವಿಭಾಗ ಪಿಎಸ್ಐ ಬಸಪ್ಪ ಲಮಾಣಿ, ಎಎಸ್‍ಐ ಕೆ.ಎನ್.ಹಗರಪ್ಪ, ಮಾರೇಶ್, ತ್ಯಾಗರಾಜ್, ಗುಪ್ತದಳ ಮಾಹಿತಿದಾರ ಮಂಜುನಾಥ, ಪಟ್ಟಣದ ವರ್ತಕರಾದ ಡಿ.ಮೌನೇಶ್, ಸಿದ್ದಲಿಂಗಪ್ಪ,ಜಿ.ರಾಜಾರಾವ್, ನವೀನ್ ಬಾಗ್ರೇಚಾ, ದಾದಾವಲಿ, ನವೀನ್, ಕೃಷ್ಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.