ಕರ್ಫ್ಯೂನಲ್ಲೂ ಕ್ಯಾಪ್ಸಿಕಮ್‌ಗೆ ಆನ್‌ಲೈನ್ ಮಾರುಕಟ್ಟೆ ಕಂಡುಕೊಂಡ ಯುವ ರೈತರು

ದಾವಣಗೆರೆ,ಮೇ.4: ಕೊರೊನಾ ನಿಯಂತ್ರಣ ಕ್ರಮವಾಗಿ ಸರ್ಕಾರ ವಿಧಿಸಿರುವ ಜನತಾ ಕರ್ಫ್ಯೂನಿಂದ ರೈತರು ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಮೂರು ಜನ ಯುವ ರೈತರು ಸೇರಿ ಬೆಳೆದಿರುವ ಕ್ಯಾಪ್ಸಿಕಮ್‌ಗೆ ಸಾಮಾಜಿಕ ಜಾಲ ತಾಣದ ಮೂಲಕ ಮಾರುಕಟ್ಟೆ ಕಂಡುಕೊಂಡು ಲಾಭ ಗಳಿಕೆಯತ್ತ ಸಾಗಿದ್ದಾರೆ.ಹೌದು… ದಾವಣಗೆರೆ ಜಿಲ್ಲೆಯ ಸಾಲಕಟ್ಟೆ ಗ್ರಾಮದ ಬಳಿಯ ಸತ್ಯನಾರಾಯಣ ಕಾಂಪ್‌ನ ಒಂದು ಎಕರೆ ಜಮೀನಿನಲ್ಲಿ ಯುವ ರೈತರಾದ ಆದರ್ಶ, ಶ್ರೀಧರ್ ಹಾಗೂ ಅಮರ್ ಸೇರಿಕೊಂಡು ಸಾವಯವ ಕೃಷಿಯ ಮೂಲಕ ಜನವರಿ ತಿಂಗಳಲ್ಲಿ ರಿಜ್ವಾನ್ ತಳಿಯ ಕ್ಯಾಪ್ಸಿಕಮ್ (ದೊಣ್ಣ ಮೇಣಸಿನಕಾಯಿ) ಬೀಜ ಬಿತ್ತನೆ ಮಾಡಿದ್ದು, ಈಗ ಹುಲುಸಾಗಿ ಫಸಲು ಬಂದಿದೆ.ಇನ್ನೆನ್ನೂ ಕ್ಯಾಪ್ಸಿಕಮ್ ಕೊಯ್ಲು ಆರಂಭಿಸಬೇಕೆನ್ನುವಷ್ಟರಲ್ಲಿ ಕೊರೊನಾ ನಿಯಂತ್ರಣ ಕ್ರಮವಾಗಿ ಸರ್ಕಾರ ಜನತಾ ಕರ್ಫ್ಯೂ(ಲಾಕ್‌ಡೌನ್) ಘೋಷಿಬಿಟ್ಟಿತ್ತು. ಇದರಿಂದ ಆರಂಭದಲ್ಲಿ ದಿಗಲು ಬಡಿದಂತಾದ ಯುವ ರೈತರು, ನಂತರದಲ್ಲಿ ಬೇರೆಯವರಂತೆ ಕೈಚೆಲ್ಲಿ ಕುಳಿತುಕೊಳ್ಳದೆ, ತಾವು ಬೆಳೆದಿರುವ ದೊಣ್ಣ ಮೆಣಸಿನ ಕಾಯಿಗೆ ಹೇಗಾದರೂ ಮಾಡಿ ಮಾರುಕಟ್ಟೆ ಕಂಡುಕೊಳ್ಳಬೇಕೆಂಬ  ಕಾರಣಕ್ಕೆ ಹೊರ ರಾಜ್ಯ ಮತ್ತು ವಿದೇಶಗಳಿಗೆ ಕ್ಯಾಪ್ಸಿಕಮ್ ರಫ್ತು ಮಾಡುವ ಕಂಪನಿಯೊಂದಿಗೆ ಮಾತುಕತೆ ನಡೆಸಿದ್ದರು.ಆದರೆ, ಜನತಾ ಕರ್ಫ್ಯೂನ ದುರ್ಲಭ ಪಡೆದುಕೊಂಡು ಮಧ್ಯವರ್ತಿಯಾಗಿ ಕೆಲಸ ಮಾಡುವ ಸಂಸ್ಥೆಯು ಹೆಚ್ಚಿನ ಲಾಭ ಪಡೆಯಲು ಯುವ ರೈತರಿಂದ ಕೇವಲ 10ರಿಂದ 15 ರೂ.ನಂತೆ ಕೆಜಿ ನೀಡುವಂತೆ ಹೇಳಿದೆ. ಹೀಗಾಗಿ ಇಷ್ಟು ಕಡಿಮೆ ದರಕ್ಕೆ ಮೆಣಸಿನ ಕಾಯಿ ನೀಡಿದರೆ, ಹಾಕಿದ ಬಂಡವಾಳವೂ ಕೈ ಸೇರುವುದಿಲ್ಲ ಎಂಬ ಕಾರಣಕ್ಕೆ ಆ ಸಂಸ್ಥೆಗೆ ಉತ್ಪನ್ನ ನೀಡದೆ, ತಾವೇ ಸ್ನೇಹಿತರೊಬ್ಬರ ಸಹಕಾರ ಪಡೆದು ಆನ್‌ಲೈನ್ ವ್ಯವಸ್ಥೆಯ ಮೂಲಕ ಮಾರುಕಟ್ಟೆ ಕಂಡು ಕೊಂಡಿದ್ದಾರೆ. ಇದು ಎಲ್ಲಾ ರೈತರಿಗೂ ಮಾದರಿಯಾಬೇಕಿದೆ.ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಯುವ ರೈತ ಆದರ್ಶ, ನಾವು ಒಂದು ಎಕರೆಯಲ್ಲಿ ಕ್ಯಾಪ್ಸಿಕಮ್ ಬೆಳೆಯಲು ಈಗಾಗಲೇ 5 ಲಕ್ಷ ರೂ. ಬಂಡವಾಳ ಹಾಕಿದ್ದೇವೆ. ಆದರೆ, 10ರಿಂದ 15 ರೂ.ಗೆ ಕ್ಯಾಪ್ಸಿಕಮ್ ಕೊಟ್ಟರೆ ಏನೂ ಲಾಭವಾಗುವುದಿಲ್ಲ. ಆದ್ದರಿಂದ ತಮ್ಮ ಸ್ನೇಹಿತ ಸಲಹೆ ಪಡೆದು ವಾಟ್ಸಾಪ್, ಫೇಸ್‌ಬುಕ್ ಮೂಲಕ ಮಾರುಕಟ್ಟೆ ಕಂಡುಕೊಂಡಿದ್ದೇವೆ ಎಂದರು.ನಾವು ಫೇಸ್‌ಬುಕ್, ವಾಟ್ಸಾಪ್ ಗ್ರೂಪ್‌ನಲ್ಲಿ ಕ್ಯಾಪ್ಸಿಕಮ್ ಡೋರ್ ಡಿಲವರಿ ಸಿಗಲಿದೆ ಎಂಬ ಮಾಹಿತಿ ಹಾಕುತ್ತಿದ್ದೇವೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 50 ರೂ.ಗೆ ಕೆಜಿಯಂತೆ ಕ್ಯಾಪ್ಸಿಕಮ್ ಮಾರಾಟವಾಗುತ್ತಿದೆ ಎಂದು ಹೇಳಿದರು.ಕ್ಯಾಪ್ಸಿಕಮ್ ಬೇಕಾದವರು ಮೊ: 8867637316 ಸಂಖ್ಯೆಗೆ ಸಂಪರ್ಕಿಸಬಹುದು.