ಕರ್ಫ್ಯೂಗೆ ಉತ್ತಮ ಸ್ಪಂದನೆ: ಪಾಲನೆಯಾದ ಮಾರ್ಗಸೂಚಿ

ದಾವಣಗೆರೆ,ಏ.25: ಕೊರೊನಾ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿರುವ ವಾರಾಂತ್ಯದ ಕರ್ಫ್ಯೂಗೆ 2ನೇ ದಿನವಾದ ಭಾನುವಾರವೂ ಉತ್ತಮ ಸ್ಪಂದನೆ ವ್ಯಕ್ತವಾದರೂ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದ ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಕೋವಿಡ್ ಮಾರ್ಗಸೂಚಿಯಂತೆ ಕೆಲವಡೆ ವ್ಯಾಪಾರ ವಹಿವಾಟು ನಡೆಯಿತು.ಕರ್ಫ್ಯೂ ಸಂದರ್ಭದಲ್ಲಿ ಜನ ಜೀವನಕ್ಕೆ ತೊಂದರೆಯಯಾಗಬಾರದೆಂಬ ಕಾರಣಕ್ಕೆ ಕರ್ಫ್ಯೂ ಸಡಿಲಿಸಿ, ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಅಗತ್ಯ ವಸ್ತುಗಳಾದ ಸೊಪ್ಪು, ತರಕಾರಿ, ಹಾಲು, ದಿನಸಿ, ಮೀನು, ಮಾಂಸ ಖರೀದಿಗೆ ಸರ್ಕಾರ ಅವಕಾಶ ಕಲ್ಪಿಸಿತ್ತು. ಹೀಗಾಗಿ ನಗರದ ಕೆ.ಆರ್. ಮಾರ್ಕೇಟ್, ಕಾಯಿ ಪೇಟೆ, ಗಡಿಯಾರ ಕಂಬದ ಬಳಿ ಅಗತ್ಯ ವಸ್ತು ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರೂ. ಈ ವೇಳೆ ಯಾವುದೇ ಸಾಮಾಜಿಕ ಅಂತರ ಇಲ್ಲದೆ ವ್ಯಾಪಾರ ನಡೆದಿದೆ. ಅಲ್ಲದೆ, ಬಹುತೇಕರ ಮಾಸ್ಕ್ ಬಾಯಿ, ಮೂಗು ಮುಚ್ಚದೆ ಕೇವಲ ಗದ್ದಕ್ಕೆ ಸೀಮಿತವಾಗಿತ್ತು. ಹೀಗಾಗಿ ಕೊರೊನಾ ಮತ್ತಷ್ಟು ಹರಡುವ ಭೀತಿ ಹೆಚ್ಚಾಗಿದೆ.ಹತ್ತು ಗಂಟೆಯಾದರೂ ಕೆ.ಆರ್. ಮಾರುಕಟ್ಟೆ ಸೇರಿದಂತೆ ಇತರೆಡೆ ವ್ಯಾಪಾರಿಗಳು ವ್ಯಾಪಾರ ಸ್ಥಗಿತಗೊಳಿಸಿರಲಿಲ್ಲ. ಹೀಗಾಗಿ ತಹಶೀಲ್ದಾರ್ ಗಿರೀಶ್ ಪೊಲೀಸರೊಂದಿಗೆ ಆಗಮಿಸಿ ವಾಪಾರ, ವಹಿವಾಟು ಬಂದ್ ಮಾಡಿಸಿ, ವ್ಯಾಪಾರಸ್ಥರು ಮತ್ತು ಗ್ರಾಹಕರನ್ನು ಮನೆಗೆ ಕಳುಹಿಸಿದರು.ಹತ್ತು ಗಂಟೆಯ ಬಳಿಕ ಅಂಗಡಿಗಳು ಬಂದ್ ಆಗಿದ್ದರಿಂದ ಹಾಗೂ ಆಟೋ, ಬಸ್ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದ್ದರಿಂದ ರಸ್ತೆಗಳು ಬಣ ಗೂಡುತ್ತಿದ್ದವು. ಅವಶ್ಯಕ ಕೆಲಸಗಳಿಗಾಗಿ ದಿಚಕ್ರ ವಾಹನ, ಕಾರು ಮತ್ತು ಕಾಲ್ನಡಿಗೆಯಲ್ಲಿ ಅಲ್ಲೊಬ್ಬರೂ, ಇಲ್ಲೊಬ್ಬರು ಸಂಚರಿಸುತ್ತಿರುವವರನ್ನು ತಡೆದು ಪೊಲೀಸರು ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆಗ ಸಕಾರಣ ಹೇಳಿದವರನ್ನು ಮುಂದಕ್ಕೆ ಕಳುಹಿಸುತ್ತಿದ್ದರು. ಅನಗತ್ಯವಾಗಿ ಓಡಾಡುವವರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.