ಕರ್ಪ್ಯೂ : ಬೆಳಗಾವಿ ವ್ಯಾಪಾರಿಗಳ ವಿರೋಧ

ಬೆಳಗಾವಿ,ಏ.೨೪- ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಕರ್ಪ್ಯೂ ಜಾರಿಯಿಂದ ಅಗತ್ಯ ವಸ್ತುಗಳ ಹೊರತು ಪಡಿಸಿ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಮಾಡಲು ಆದೇಶ ಹೊರಡಿಸಿದೆ. ಇದರಿಂದ ವ್ಯಾಪಾರಿಗಳು ಕಂಗಾಲಾಗಿದ್ದು ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನದ ವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದ್ದಾರೆ.
ಇನ್ನೂ ವ್ಯಾಪಾರಿಗಳ ಬೆಂಬಲಕ್ಕೆ ಮುಂದಾಗಿರುವ ಬೆಳಗಾವಿಯ ಶಾಸಕರಾದ ಅಭಯ ಪಾಟೀಲ್ ಹಾಗೂ ಅನಿಲ್ ಬೆನಕೆ ಸರ್ಕಾರದ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಹರೀಶ್ ಕುಮಾರ್ ರನ್ನು ಭೇಟಿಯಾಗಿರುವ ವ್ಯಾಪರಿಗಳು ತಮ್ಮ ಪರಿಷ್ಕೃತ ಆದೇಶ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.
ಕಿರಾಣಾ ವ್ಯಾಪಾರಿಗಳು, ಬಟ್ಟೆ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಶಾಮೀಯಾನ ಮಾಲೀಕರು ಹಾಗೂ ಸಣ್ಣಪುಟ್ಟ ಅಂಗಡಿಗಳ ಮಾಲೀಕರು ಸಹ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ, ಕೋವಿಡ್ ನಿಯಮ ಜನರಿಗೆ ತೊಂದರೆ ಆಗದಂತೆ ಕರ್ಪ್ಯೂ ಜಾರಿಗೆ ತರಬೇಕು. ಶನಿವಾರ, ಭಾನುವಾರ ವಾರಾಂತ್ಯದ ಮಾಡಿದರೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಪೂರ್ತಿ ಲಾಕ್ ಡೌನ್ ಮಾಡಿದರೆ ಕೊರೊನಾಗಿಂತಲೂ ಭೀಕರ ಸ್ಥಿತಿ ನಿರ್ಮಾಣವಾಗಲಿದೆ.
ದೊಡ್ಡ ದೊಡ್ಡ ಮಾಲ್ ತೆಗೆಯಲು ಬಿಟ್ಟು ಚಿಕ್ಕ ಚಿಕ್ಕ ಅಂಗಡಿಯನ್ನು ಬಂದ್ ಮಾಡಿಸಿದ್ದಾರೆ. ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ ೧೦ರಿಂದ ಮದ್ಯಾಹ್ನ ೨ರ ವರೆಗೆ ವ್ಯಾಪಾರ ನಡೆಸಲು ಅವಕಾಶ ಕೊಡಬೇಕು. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ, ಇಂತಹ ಸಂದರ್ಭದಲ್ಲಿ ನಾವು ಜನರ ಪರ ನಿಲ್ಲಬೇಕಾಗುತ್ತದೆ. ಮಾರ್ಗಸೂಚಿಯಲ್ಲಿ ಅನೇಕ ಗೊಂದಲಗಳು ಇವೆ ಇದನ್ನು ಸರಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೂ ಸುರಿದು ಆಕ್ರೋಶ: ಏಕಾಏಕಿ ವಾರಾಂತ್ಯದ ಕರ್ಪ್ಯೂ ಮಾರ್ಗಸೂಚಿಯನ್ನು ಬದಲು ಮಾಡಿದ ಸರ್ಕಾರ ಎಲ್ಲಾ ವ್ಯಾಪಾರವನ್ನು ಬೀದಿಗೆ ನಿಲ್ಲಿಸಿದೆ. ಇದು ನೇರವಾಗಿ ಎಲ್ಲಾ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರೈತ ಸಿದ್ಧಪ್ಪ ರಾಜಾಪುರೆ ಎನ್ನುವ ರೈತ ತನ್ನ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೂ ಬೆಳೆದಿದ್ದಾನೆ.
ಈ ಹೂಗೆ ಪ್ರತಿ ಕೆಜಿಗೆ ೩೦ ರೂಪಾಯಿಂತೆ ವ್ಯಾಪಾರ ಮಾಡಿದ್ದು, ಆದರೇ ಸರ್ಕಾರದ ಆದೇಶದಿಂದ ಇದು ರದ್ದು ಮಾಡಲಾಗಿದೆ.
ಇದೀಗ ಕೆಜಿಗೆ ೧೦ ರೂಪಾಯಿ ಕೊಟ್ಟು ತೆಗೆದುಕೊಂಡು ಹೋಗಿ ಎಂದರೂ ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಇದರಿಂದ ಆಕ್ರೋಶಗೊಂಡ ರೈತ ತನ್ನ ಹೂವನ್ನು ಗೋಕಾಕ್ ತಹಶೀಲ್ದಾರ ಕಚೇರಿ ಮುಂದೆ ಸುರಿದು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಸರ್ಕಾರ ಇದಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾನೆ.