ಕರ್ನಾಟಕ ಸೋಲು ಬಿಜೆಪಿಗೆ ಎಚ್ಚರಿಕೆ ಗಂಟೆ

ನವದಹಲಿ,ಮೇ.೧೯- ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಅಧಿಕಾರ ಗದ್ದುಗೆಯಿಂದ ಕೆಳಗಿಳಿಸಿರುವ ಮತದಾರರು,ಕಾಂಗ್ರೆಸ್ ಕೈಗೆ ಅಧಿಕಾರ ಒಪ್ಪಿಸಿದ್ದಾರೆ. ಹೀಗಾಗಿ ವರ್ಷಾಂತ್ಯಕ್ಕೆ ನಡೆಯಲಿರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿಜೆಪಿ ಎಚ್ಚೆತ್ತುಕೊಂಡಿದೆ.
’ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಡಬಲ್ ಅಭಿವೃದ್ಧಿ ಪಥ ನೀಡಲಿದೆ ಎಂಬ ಘೋಷಣೆಗಳಿಗೆ ಮತದಾರ ಮಣೆ ಹಾಕಿಲ್ಲ. ’ಡಬಲ್ ಎಂಜಿನ್ಗೆ ತಮ್ಮ ಬೆಂಬಲವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಡಬಲ್ ಅಭಿವೃದ್ಧಿ ಪಥ ನೀಡಲಿದೆ ಎಂಬ ಘೋಷಣೆಗಳಿಗೆ ಮತದಾರ ಕಿವಿಗೊಟ್ಟಿಲ್ಲ. ಬದಲಾಗಿ ಒಂದು ಎಂಜಿನ್ ಅನ್ನು ’ಆಫ್ ಮಾಡಿದ್ದಾರೆ.
ಕರ್ನಾಕದಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಉನ್ನತ ಹುದ್ದೆಯಿಂದ ತೆಗೆದುಹಾಕುವ ಜೊತೆಗೆ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರ ಲಿಂಗಾಯತರನ್ನು ಕಾಂಗ್ರೆಸ್ ಕಡೆಗೆ ಹೋಗುವಂತೆ ಮಾಡಿದೆ.
ಎಚ್ಚೆತ್ತುಕೊಂಡ ನಾಯಕರು:
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಈ ವರ್ಷಾಂತ್ಯಕ್ಕೆ ಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಆಡಳಿತದಲ್ಲಿದೆ. ರಾಜಸ್ಥಾನದಲ್ಲಿ ಆಡಳಿತ ವಿರೋಧಿ ನೀತಿ ಲಾಭವಾಗುವ ನಿರೀಕ್ಷೆಯಲ್ಲಿದೆ ಬಿಜೆಪಿ.
ನಾಲ್ಕು ರಾಜ್ಯಗಳಲ್ಲಿ ನಾಯಕತ್ವ ಮತ್ತು ಅಭ್ಯರ್ಥಿಗಳನ್ನು ನಿರ್ಧರಿಸುವಾಗ ಜಾತಿ ಸಮೀಕರಣಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿರುವುದಾಗಿ ತಿಳಿಸಿದೆ.
ಅಗತ್ಯವಿದ್ದರೆ, ಪಕ್ಷವು ಸಣ್ಣ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿಗೆ ಮುಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಒಗ್ಗಟ್ಟಿನ ಕೊರತೆ ಪಕ್ಷದ ಮುಂದಿರುವ ದೊಡ್ಡ ಸವಾಲು. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಈ ತಂತ್ರ ನಿರ್ಣಾಯಕವಾಗಿದೆ. ಕಮಲ್ ನಾಥ್ ಸರ್ಕಾರ ಉರುಳಿಸುವ ಮೂಲಕ ೨೦೨೦ ರಲ್ಲಿ ಬಿಜೆಪಿಗೆ ಸೇರಿದ ಸಿಂಧಿಯಾ ಮತ್ತು ಅವರ ನಿಷ್ಠರನ್ನು ಹೊರಗಿನವರಂತೆ ನೋಡಲಾಗಿದೆ ಎನ್ನಲಾಗಿದೆ.
ರಾಜಸ್ಥಾನದಲ್ಲಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ಆದ್ಯತೆ ಜತೆಗೆ ಕಿಶೋರಿ ಲಾಲ್ ಮೀನಾ, ಗಜೇಂದ್ರ ಸಿಂಗ್ ಶೇಖಾವತ್, ಸತೀಶ್ ಪೂನಿಯಾ ಮುಂತಾದ ವಿವಿಧ ಜಾತಿ ಗುಂಪುಗಳಿಗೆ ಸೇರಿದ ರಾಜ್ಯ ನಾಯಕರಿಗೂ ಪ್ರಾಮುಖ್ಯತೆ ನೀಡಲಾಗುವುದು. ಛತ್ತೀಸ್‌ಗಢದಲ್ಲಿ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಹಿರಿಯ ನಾಯಕ ಬ್ರಿಜ್‌ಮೋಹನ್ ಅಗರವಾಲ್, ಅರುಣ್ ಸಾವೊ ಅವರಿಗೆ ಪ್ರಾಮುಖ್ಯತೆ ನೀಡಲು ನಿರ್ಧರಿಸಲಾಗಿದೆ.
ತೆಲಂಗಾಣದಲ್ಲಿ ಬಂಡಿ ಸಂಜಯ್, ಇ ರಾಜೇಂದ್ರನ್, ಜಿ ಕಿಶನ್ ರೆಡ್ಡಿ ಅವರು ಪಕ್ಷದ ಪ್ರಮುಖ ಮುಖಗಳಾಗಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಮತ್ತು ಪಕ್ಷದ ಒಗ್ಗಟ್ಟಿನ ಮುಖವನ್ನು ಪ್ರಸ್ತುತಪಡಿಸಲು ರಾಜ್ಯ ನಾಯಕರನ್ನು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.