ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಸೋಂಕು ಹೆಚ್ಚಳ

ನವದೆಹಲಿ, ಏ.೧೭: ಕೋವಿಡ್‌ನ ಹೊಸ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿರುವ ೧೨ ರಾಜ್ಯಗಳ ಪರಿಸ್ಥಿತಿ ಬಗ್ಗೆ ಚರ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಇದೆಯೆನ್ನುವುದನ್ನು ಮನಗಂಡು, ದೇಶದಲ್ಲಿ ವೈದ್ಯಕೀಯ ಗುಣಮಟ್ಟದ ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಿ ಎಂದು ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ, ವಿವಿಧ ಸಚಿವಾಲಯಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ಅತಿಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ದೆಹಲಿ. ಛತ್ತೀಸಗಡ, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿನ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಈ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಅಗತ್ಯವಿರುವ ಆಮ್ಲಜನಕದ ಪ್ರಮಾಣದ ಅಂದಾಜನ್ನು ಪ್ರಧಾನಿಗೆ ವಿವರಿಸಲಾಯಿತು.
ದೇಶದ ಎಲ್ಲಾ ಆಮ್ಲಜನಕ ಘಟಕಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಪ್ರಧಾನಿ ಅವರು ಸೂಚಿಸಿದ್ದಾರೆ. ಈ ಘಟಕಗಳು ೨೪ ಗಂಟೆಯೂ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಕೈಗಾರಿಕಾ ಆಮ್ಲಜನಕದ ಸಿಲಿಂಡರ್‌ಗಳನ್ನು, ವೈದ್ಯಕೀಯ ಆಮ್ಲಜನಕದ ಸಿಲಿಂಡರ್‌ಗಳಾಗಿ ಪರಿವರ್ತಿಸಲು ಅನುಮತಿ ನೀಡಲಾಗಿದೆ. ವಿದೇಶಗಳಿಂದ ಆಮ್ಲಜನಕ ಆಮದು ಮಾಡಿಕೊಳ್ಳಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ವಾಣಿಜ್ಯ ಸಚಿವಾಲಯಕ್ಕೆ ಸೂಚಿಸಲಾಗಿದೆ ಎಂದು ಪ್ರಧಾನಿ ಕಾರ್ಯಾಲಯವು ಮಾಹಿತಿ ನೀಡಿದೆ.
ಕೈಗಾರಿಕಾ ವಲಯಕ್ಕೆ ಲಭ್ಯವಾಗುತ್ತಿರುವ ಹೆಚ್ಚುವರಿ ಆಮ್ಲಜನಕವನ್ನು ವೈದ್ಯಕೀಯ ವಲಯಕ್ಕೆ ಪೂರೈಕೆ ಮಾಡುವಂತೆ ಸಭೆಯಲ್ಲಿ ಸೂಚಿಸಲಾಗಿದೆ. ಆಮ್ಲಜನಕದ ಟ್ಯಾಂಕರ್‌ಗಳ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ವಸ್ತುಗಳ ತಯಾರಿಕೆ ಮತ್ತು ಪೂರೈಕೆ ಮೇಲೆ ಯಾವುದೇ ನಿರ್ಬಂಧ ಹೇರಬಾರದು ಎಂದೂ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಕೊವಾಕ್ಸಿನ್ ಹೊಸ ಘಟಕ
ದೇಶಾದ್ಯಂತ ಕೋವಿಡ್ ಲಸಿಕೆಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲು ೬೫ ಕೋಟಿ ರೂ.ಗಳ ಅನುದಾನ ಸೇರಿದಂತೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಉತ್ಪಾದನಾ ಸಾಮರ್ಥ್ಯವನ್ನು ಮೇ-ಜೂನ್ ವೇಳೆಗೆ ದ್ವಿಗುಣಗೊಳಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.