ಕರ್ನಾಟಕ ಸೇರಿ ೮ ರಾಜ್ಯಗಳ ಜತೆ ಕೇಂದ್ರ ಸಭೆ

ನವದೆಹಲಿ, ಏ.೨- ದೇಶದ ಎಂಟು ರಾಜ್ಯಗಳಲ್ಲಿ ಕೊರೋನೋ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ರಾಜ್ಯಗಳೊಂದಿಗೆ ಸೋಂಕು ನಿಯಂತ್ರಣ ಸಂಬಂಧ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಇಂದು ಸಂಜೆ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ,ಪಂಜಾಬ್, ಕೇರಳ ತಮಿಳುನಾಡು, ಮಧ್ಯಪ್ರದೇಶ , ಪಶ್ಚಿಮಬಂಗಾಳ ಛತ್ತೀಸ್ ಗಡ ಸೇರಿದಂತೆ ಎಂಟು ರಾಜ್ಯಗಳ ಮುಖ್ಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಒತ್ತು ನೀಡುವಂತೆ ಸೂಚನೆ ನೀಡುವ ಸಾಧ್ಯತೆಗಳಿವೆ.
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನೋ ಸೋಂಕು ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಅದರಲ್ಲೂ ಎಂಟು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೮೧ ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗಿವೆ ಕಳೆದ ಆರು ತಿಂಗಳುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡ ದಾಖಲೆ ಇದಾಗಿದೆ.
ಮಹಾರಾಷ್ಟ್ರ ಒಂದರಲ್ಲಿ ಶೇಕಡ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರತಿದಿನ ಸೋಂಕು ಪ್ರಮಾಣ ಕಾಣಿಸಿಕೊಳ್ಳುತ್ತಿದೆ ಇದು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ ಜೊತೆಗೆ ಅಕ್ಕಪಕ್ಕದ ರಾಜ್ಯಗಳಲ್ಲಿ ಆತಂಕ ಹೆಚ್ಚು ಮಾಡಿದೆ