ಕರ್ನಾಟಕ ಸೇರಿ ಹಲವೆಡೆ ಮಳೆ ನಿರೀಕ್ಷೆ

ನವದೆಹಲಿ,ಏ.೧೯-ದಿನದಿಂದ ದಿನಕ್ಕೆ ದೇಶದಲ್ಲಿ ಹವಾಮಾನದಲ್ಲಿ ಏರುಪೇರು ಉಂಟಾಗುತ್ತಿದೆ, ಪೂರ್ವದಿಂದ ಉತ್ತರಕ್ಕೆ ಮತ್ತು ದಕ್ಷಿಣದಿಂದ ಪಶ್ಚಿಮ ಭಾಗದಲ್ಲಿ ದೇಶದ ಬಿಸಿ ಗಾಳಿ ಬೀಸಲಿದೆ.ಇದೇ ವೇಳೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯಾಗುವ ಮುನ್ಸೂಚನೆ ದೊರೆತಿದೆ.
ಮುಂದಿನ ಕೆಲವು ದಿನಗಳಲ್ಲಿ ಆರು ರಾಜ್ಯಗಳಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮತ್ತು ಉತ್ತರ ಭಾರತದ ಎಂಟು ರಾಜ್ಯಗಳಲ್ಲಿ ಮಳೆಯ ಚಟುವಟಿಕೆಯ ಮುನ್ಸೂಚನೆ ನೀಡಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ ೨೧ ರವರೆಗೆ ಉಷ್ಣ ಅಲೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದರೆ, ಮುಂದಿನ ಮೂರು ದಿನಗಳವರೆಗೆ, ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪುದುಚೇರಿಗಳು ಬಿಸಿಯಾದ ವಾತಾವರಣವನ್ನು ಅನುಭವಿಸುತ್ತವೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ಮುಂಬೈ ಮತ್ತು ಇತರ ಹಲವು ರಾಜ್ಯಗಳಿಗೆ ಶಾಖದ ಅಲೆಯ ಎಚ್ಚರಿಕೆಗಳನ್ನು ನೀಡಿದೆ, ಆದರೆ ದೆಹಲಿ ಮಾತ್ರ ಮುಂದಿನ ಕೆಲವು ದಿನಗಳವರೆಗೆ ತೀವ್ರ ತಾಪಮಾನದಿಂದ ರಕ್ಷಿಸಲ್ಪಡುತ್ತದೆ.
ಏಪ್ರಿಲ್ ಮುಗಿಯುವ ಮೊದಲೇ, ಹವಾಮಾನವು ತನ್ನ ಪ್ರಭಾವ ತೋರಿಸಲು ಪ್ರಾರಂಭಿಸಿದೆ. ಯುಪಿ-ಬಿಹಾರದಿಂದ ಒಡಿಶಾದವರೆಗೆ ವಿಪರೀತ ಶಾಖವು ಜನರನ್ನು ಕಾಡಲಾರಂಭಿಸಿದೆ. ಆದರೆ, ದೆಹಲಿ-ಎನ್‌ಸಿಆರ್‌ನಲ್ಲಿ ಮೋಡ ಕವಿದಿದೆ. ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯ ಪರಿಸ್ಥಿತಿ ಕಂಡುಬರಲಿದೆ ಎಂದು ಐಎಂಡಿ ತಿಳಿಸಿದೆ.
ಇಂದು ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಸಂಬಂಧಿತ ವೆಬ್‌ಸೈಟ್ ಸ್ಕೈಮೆಟ್ ಹೇಳಿದೆ. ಇಷ್ಟು ಮಾತ್ರವಲ್ಲದೆ ಇಂದು ಮತ್ತು ನಾಳೆ ದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.
ಇದೇ ವೇಳೆ, ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ತೀವ್ರ ಗುಡುಗು, ಸಿಡಿಲು ಸಹಿತ ಗಂಟೆಗೆ ೪೦-೫೦ ಕಿ.ಮೀ ವೇಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದು, ಮಳೆಯ ಸುಳಿವಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಇದೇ ಸ್ಥಿತಿ ಕಂಡು ಬರುತ್ತಿದೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಅಸಹನೀಯ ಬಿಸಿಲು ಇತ್ತು. ನಿನ್ನೆ ಶಿವಮೊಗ್ಗದಲ್ಲಿ ಗಾಳಿ, ಗುಡುಗು ಸಹಿತ ಮಳೆ ಆರಂಭವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.