ಕರ್ನಾಟಕ ಸಾಮ್ರಾಜ್ಯ  ಪ್ರತಿಷ್ಠಾಪನಾ ದಿನೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.19: ಕರ್ನಾಟಕಲ್ಲಿ  ವಿಜಯನಗರ ಸಾಮ್ರಾಜ್ಯವು 1336 ರ ಎಪ್ರಿಲ್ 18 ರಂದು ಸಂಸ್ಥಾಪನೆಗೊಂಡ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ನಗರದ ಡಿ.ಆರ್.ಕೆ.ರಂಗ ಮಂದಿರದಲ್ಲಿ.  ‘ಕರ್ನಾಟ ಸಾಮ್ರಾಜ್ಯ’ದ ಪ್ರತಿಷ್ಠಾಪನಾ ದಿನೋತ್ಸವವನ್ನು, ಬಳ್ಳಾರಿಯ ‘ಪುನರುತ್ಥಾನ’ ಅಧ್ಯಯನ ಕೇಂದ್ರದಿಂದ  ಆಚರಿಸಲಾಯಿತು.
ಇತಿಹಾಸ ಸಂಶೋಧಕ ಕೊಂಡಜ್ಜಿ ವೆಂಕಟೇಶ ‘ಅಮಾತ್ಯ ಲಕ್ಷ್ಮೀಧರ’ ಮತ್ತು ‘ಕರ್ನಾಟ ವಿಜಯನಗರ ಸಾಮ್ರಾಜ್ಯ’ದ ಪ್ರಜಾಹಿತ ಜನಕಲ್ಯಾಣ ಕಾರ್ಯದ ಹಿರಿಮೆ – ಎಂಬ ವಿಷಯದ ಕುರಿತಂತೆ ಉಪನ್ಯಾಸ ನೀಡಿದರು.
ಸನಾತನ ಧರ್ಮ ಸಂಸ್ಕೃತಿ ಸಂರಕ್ಷಣೆ ಸಂವರ್ಧನಾ ಕೈಂಕರ್ಯದ ವಿಜಯನಗರದ ವೀರಗಾಥೆಯನ್ನು, ಕನ್ನಡಿಗರ ಸಾಂಸ್ಕೃತಿಕ ಇತಿಹಾಸದ ಕಾಣ್ಕೆ ಕೊಡುಗೆಗಳನ್ನುತಿಳಿಸಿದರು.
 ಹಂಪಿಯ ಹಿರಿಮೆಯನ್ನು ಸ್ಮರಿಸುತ್ತಾ, ಹಂಪಿಯನ್ನು ಮರಳಿ ಕಟ್ಟುವ ಕಾರ್ಯ ಆಗಬೇಕು ಎಂದರು.
ಸಾಹಿತಿ ಗಂಗಾಧರ ಪತ್ತಾರ,  ಹಂಪಿಯ ವೈಭವದ ಕುರಿತಂತೆ ತಾವು ರಚಿಸಿದ ಖಂಡ ಕಾವ್ಯ ನೀಳ್ಗವನದ ಸುಂದರ ಕಾವ್ಯ ವಾಚನವನ್ನು ಮಾಡಿ ಶ್ರೋತೃಗಳ ಮನಸೂರೆಗೊಂಡರು.
ಅಭಿನಯ ಕಲಾಕೇಂದ್ರದ ಸಂಚಾಲಕ ಕೆ.ಜಗದೀಶ್ ಅವರು ಹಂಪಿಯ ನಿರ್ಮಾಣದ ಹಿಂದಿನ ಸಮನ್ವಯ ದೃಷ್ಟಿಕೊನವನ್ನು ಸ್ಮರಿಸುತ್ತಾ ಸಮ್ರಾಜ್ಯದ ಸಾಮರಸ್ಯದ ಕುರಿತು ತಿಳಿಸಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಂಗಭೂಮಿ ವಿಭಾಗದ ಉಪನ್ಯಾಸಕ, ಡಿ.  ಆರ್.ಕೆ ರಂಗಸಿರಿಯ ಸಂಚಾಲಕ, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ,  ವಿಜಯನಗರದ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಇಂದಿಗೂ ಪ್ರಸ್ತುತವೆಂದೂ ಹೇಳಿದರು.
‘ಪ್ರಕೃತಿ ಸಂಗೀತಾಲಯ’ ಸಂಗೀತ ಶಿಕ್ಷಕಿ ರೇಣುಕಾ ಅಭಿಲಾಷ್,  ಎರ್ರೆಗೌಡ, ಕೃಷ್ಣ ಶ್ರೀಕೃತಿ, ವಿಜಯನಗರದ ಇತಿಹಾಸ ಹಾಗೂ ಸಾಂಸ್ಕೃತಿಕ ವೈಭವವನ್ನು ಮೆರೆಯುವ ಗೀತೆಗಳ ಗಾಯನ ಮಾಡಿದರು.
ವಸುಧಾ ಧಾರವಾಡಕರ್ ಕಾರ್ಯಕ್ರಮ ನಿರೂಪಿಸಿದರು. ‘ಪುನರುತ್ಥಾನ’ ಅಧ್ಯಯನ ಕೇಂದ್ರದ ಸಂಚಾಲಕ ಶ್ರೀನಾಥ ಜೋಷಿ ವಂದಿಸಿದರು.
ವಿಜಯನಗರ ಹಾಗೂ ವಿವಿಧ ವಿಷಯಗಳ  ‘ಪುಸ್ತಕ ಪ್ರದರ್ಶನ’ವನ್ನು ಏರ್ಪಡಿಸಲಾಗಿತ್ತು.