ಕರ್ನಾಟಕ ಸಾಂಸ್ಕೃತಿಕ ವೈಭವಕ್ಕೆ ಮನಸೋತ ಫ್ರೆಂಚ್ ಡಿಸೈನಿಂಗ್ ವಿದ್ಯಾರ್ಥಿಗಳು

ಸಂಜೆವಾಣಿ ನ್ಯೂಸ್
ಮೈಸೂರು: ಮೇ.06:-ಕರ್ನಾಟಕದ ಸಾಂಸ್ಕೃತಿಕ ವೈಭವ ಹಾಗೂ ವಾಸ್ತುಶೈಲಿಯ ಪರಂಪರೆ ಕಂಡು ಫ್ರಾನ್ಸ್‍ನ ಲಿಸಾ ಸ್ಕೂಲ್ ಆಫ್ ಡಿಸೈನಿಂಗ್ ವಿದ್ಯಾರ್ಥಿಗಳು ಬೆರಗಾದರು. ಇಂದು ಬೊಂಬೆಗಳ ನಗರ ಎಂದೇ ಖ್ಯಾತಿಗಳಿಸಿರೋ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಚನ್ನಪಟ್ಟಣ ಕ್ರಾಫ್ಟ್ಸ್ನಲ್ಲಿರುವ ನುರಿತ ಕುಶಲಕರ್ಮಿಗಳೊಂದಿಗೆ ವಿಶೇಷ ಸಂವಾದ ನಡೆಸಿದರು. ಹಲವು ತಲೆಮಾರುಗಳಿಂದ ಬಂದಿರುವ ಸಾಂಪ್ರಾದಾಯಿಕ ಕಲೆ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಂಡರು. ಈ ವೇಳೆ ಕುಶಲಕರ್ಮಿಗಳ ಕಾರ್ಯಕ್ಷಮತೆ ಹಾಗೂ ಕಲೆಯನ್ನು ಗೌರವಿಸುವ ವಿಧಾನವನ್ನು ಕಂಡು ವಿದ್ಯಾರ್ಥಿಗಳು ಮೂಕವಿಸ್ಮಿತರಾದರು.
ಈ ಪ್ರವಾಸದಲ್ಲಿ ಫ್ರೆಂಚ್ ವಿದ್ಯಾರ್ಥಿಗಳು ತಾವು ಕಂಡ ಅದ್ಭುತ ಕಲೆಯನ್ನು ಹಾಗೂ ಅಲ್ಲಿ ಪಡೆದುಕೊಂಡ ಅನುಭವವನ್ನು ವಿಡಿಯೋದಲ್ಲಿ ಸೆರೆ ಹಿಡಿದರು. ನಂತರ ಮೈಸೂರು ಅರಮನೆಗೆ ಭೇಟಿ ನೀಡಿ, ಅಲ್ಲಿರುವ ಕಣ್ಮನ ಸೆಳೆಯುವ ವಾಸ್ತುಶಿಲ್ಪಕ್ಕೆ ವಿದ್ಯಾರ್ಥಿಗಳು ಬೆರಗಾದರು. ಈ ವೇಳೆ ಕರ್ನಾಟಕದ ಪರಂಪರೆ ಹಾಗೂ ಕರಕುಶಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನ ವಾಸ್ತು ವೈಭವವು ಡಿಸೈನಿಂಗ್ ವಿದ್ಯಾರ್ಥಿಗಳ ವಿನ್ಯಾಸ ಕಲೆಗೆ ಮತ್ತಷ್ಟು ಹೊಸ, ಹೊಸ ಸಾಧ್ಯತೆಗಳನ್ನು ಯೋಚಿಸುವಂತೆ ಪ್ರೆರೇಪಿಸಿತು. ಈ ಮೂಲಕ ಫ್ರಾನ್ಸ್ನ ವಿದ್ಯಾರ್ಥಿಗಳಿಗೆ ಭಾರತದ ಸಾಂಸ್ಕೃತಿಕ ಹಾಗೂ ಪಾರಂಪರಿಕ ಶ್ರೀಮಂತಿಕೆಯ ಪರಿಚಯವಾಯಿತು.
ಬೆಂಗಳೂರಿನ ಲಿಸಾ ಸ್ಕೂಲ್ ಆಫ್ ಡಿಸೈನ್‍ನಲ್ಲಿ ಮುದ್ರಣಕಲೆ ಮತ್ತು ಉತ್ಪನ್ನ ವಿನ್ಯಾಸ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಇಂಗ್ಲೀಷ್ನ ಈ 27 ನೇ ಅಕ್ಷರವನ್ನು ಮರುಸೃಷ್ಟಿಸುವ ಪ್ರಯತ್ನ ಮಾಡಿದರು.ಈ ಕಾರ್ಯಾಗಾರದಲ್ಲಿ ಲಿಸಾ ಸ್ಕೂಲ್ ಆಫ್ ಡಿಸೈನ್‍ನಿಂಗ್ ಬೆಂಗಳೂರಿನ 2ನೇ ವರ್ಷದ ಪದವಿ ವಿದ್ಯಾರ್ಥಿಗಳು ಮತ್ತು ಫ್ರಾನ್ಸ್ ನ ಸ್ಟ್ರಾಸ್‍ಬರ್ಗ್ ಲಿಸಾ ಸ್ಕೂಲ್ ಆಫ್ ಡಿಸೈನಿಂಗ್ನ ವಿಸಿಟಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.