ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಆಪರೇಷನ್:ಶಿಂಧೆ

ಮುಂಬೈ,ಮೇ೧೩:ಲೋಕಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಆಪರೇಷನ್ ಆಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಹೇಳುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಬಹುದು ಎಂಬ ಸುಳಿವು ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನಗಳು ನಡೆಯಲಿವೆ ಎಂಬ ಸುದ್ದಿಗಳು ಹರಿದಾಡುತ್ತಿರುವಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಅವರು ಕರ್ನಾಟಕ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಕಸರತ್ತು ನಡೆದಿದೆ ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಮಹಾರಾಷ್ಟ್ರದ ಸತಾರಾದಲ್ಲಿ ಮಾತನಾಡಿದ ಶಿಂಧೆ ಅವರು ನಾನು ಇತ್ತೀಚೆಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಕರ್ನಾಟಕದಲ್ಲಿಯೂ ನಾಥ ಆಪರೇಷನ್‌ಮಾಡುವುದಿದೆ ಎಂದು ಅಲ್ಲಿನ ನಾಯಕರು ಹೇಳಿದರು. ನಾಥ ಆಪರೇಷನ್ ಎಂದರೆ ಏನು ಅಂತ ಕೇಳಿದೆ. ನೀವು ಮಹಾರಾಷ್ಟ್ರ ಘಟಬಂಧನ ಸರ್ಕಾರ ಪತನ ಮಾಡಿದ್ದೀರಿ. ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯವಿದೆ. ಇದುವೇ ನಾಥ ಆಪರೇಷನ್ ಎಂದು ಹೇಳಿದರು. ಆಗ ನಾನು ಖಂಡಿತವಾಗಿ ನಾನು ಬರುತ್ತೇನೆ ಎಂದು ಹೇಳಿದ್ದೇನೆ ಎಂದರು.
ಕರ್ನಾಟಕದಲ್ಲಿ ಬಹಳ ದಿನ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಲೋಕಸಭಾ ಚುನಾವಣೆ ನಂತರ ಕರ್ನಾಟಕಕ್ಕೆ ಬರುವಂತೆ ಕರ್ನಾಟಕದ ನಾಯಕರು ಆಹ್ವಾನ ನೀಡಿದ್ದಾರೆ ಎಂದು ಶಿಂಧೆ ಸತಾರದ ಸಭೆಯಲ್ಲಿ ಹೇಳಿದರು.
ಮಹಾರಾಷ್ಟ್ರ ಮುಖ್ಯಮಂತ್ರಿಗಳ ಈ ಹೇಳಿಕೆಗೆ ಕರ್ನಾಟಕ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಸರ್ಕಾರ
ಪತನಗೊಳಿಸಲು ಬಿಜೆಪಿ-ಜೆಡಿಎಸ್ ನಾಯಕರು ಆಪರೇಷನ್ ನಡೆಸಲಿದ್ದಾರೆ ಎಂಬ ಸುಳಿವನ್ನು ಏಕನಾಥ್‌ಶಿಂಧೆ ನೀಡಿರುವುದರಿಂದ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.