ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ

ಕಲಬುರಗಿ:ಜ.12: ಮೈಸೂರು ರಾಜ್ಯ ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ಭಾಗವಾಗಿ ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಶುಕ್ರವಾರ ಕಮಲಾಪೂರ ಮಾರ್ಗವಾಗಿ ಕಲಬುರಗಿ ತಾಲೂಕಿಗೆ ಪ್ರವೇಶಿಸುತ್ತಿದ್ದಂತೆ ಗಡಿ ಗ್ರಾಮ ಅವರಾದ (ಬಿ) ನಲ್ಲಿ ತಾಲೂಕು ಆಡಳಿತದಿಂದ ಭವ್ಯ
ಸ್ವಾಗತ ಕೋರಲಾಯಿತು.

ಕಲಬುರಗಿ ಗ್ರೇಡ್-2 ತಹಶೀಲ್ದಾರ ನಿಸಾರ್ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಅವರು ಆರತಿ ಬೆಳಗಿ ರಥಯಾತ್ರೆಯನ್ನು ಕಲಬುರಗಿ ತಾಲೂಕಿಗೆ ಬರಮಾಡಿಕೊಂಡರು. ಶಾಲಾ ಮಕ್ಕಳು ಇದಕ್ಕೆ ಸಾಕ್ಷಿಯಾದರು. ಕಲಾವಿದರು ಡೊಳ್ಳು ಬಾರಿಸಿ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದರು.

ಕರ್ನಾಟಕ ಸಂಭ್ರಮ-50 “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಹೆಸರಿನಲ್ಲಿ ಇಡೀ ವರ್ಷ ನಾಡು ನುಡಿ ಕುರಿತಂತಡ ಇಡೀ ವಿಶ್ವಕ್ಕೆ ಕನ್ನಡ ಪಸರಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ತಾಯಿ ಭುವನೇಶ್ವರಿಗೆ ಪೂಜೆ:

ಕಲಬುರಗಿ ನಗರದ ಸರ್ಧಾರ್ ವಲ್ಲಾಭಾಯ್ ಪಟೇಲ್ ವೃತ್ತದಲ್ಲಿ ಜನವರಿ 13 ರಂದು ಬೆಳಿಗ್ಗೆ 9 ಗಂಟೆಗೆ ಜ್ಯೋತಿ ರಥಯಾತ್ರೆಯಲ್ಲಿರುವ ತಾಯಿ ಭುವನೇಶ್ವರಿ ಮಾತೆಗೆ ಜಿಲ್ಲಾಡಳಿತದಿಂದ ವಿಶೇಷ ಪೂಜೆ ಮಾಡಲಾಗುತ್ತಿದೆ. ಇದೇ ಸಮದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವ ದಲ್ಲಿ ವಿವಿಧ ಕಲಾ ಪ್ರದರ್ಶನ ಸಹ ನಡೆಯಲಿವೆ.