ಕರ್ನಾಟಕ ಸಂಭ್ರಮ-50: ಉಪನ್ಯಾಸ

ಧಾರವಾಡ,ನ.5: ನಾವು ಕನ್ನಡಿಗರು ಸಧ್ಯ ಆತಂಕವನ್ನು ಎದುರಿಸುತ್ತಿದ್ದೇವೆ, ಕನ್ನಡ ನಾಡಿನ ಅಸ್ಮಿತೆ, ಶ್ರೀಮಂತಿಕೆ, ಗತವೈಭವ, ಕನ್ನಡ ಕಟ್ಟಲು ಶ್ರಮಿಸಿದ ಮಹಾನ್ ಚೇತನಗಳ ಕಾರ್ಯವನ್ನು ಸ್ಮರಿಸಿಕೊಳ್ಳಬೇಕಾಗಿದೆ. ಆ ದಿಶೆಯಲ್ಲಿ ಸಾಗುವ ಹೆಚ್ಚಿನ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ. ನಮ್ಮ ಅಮೂಲ್ಯ ಕನ್ನಡ ಸಂಸ್ಕøತಿ, ಪರಂಪರೆ ಅರಿಯಬೇಕಾಗಿದೆ ಅಂದಾಗ ಆತಂಕದಿಂದ ದೂರ ಸರಿಯಲು ಸಾಧ್ಯ ಎಂದು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ `ಕರ್ನಾಟಕ ಸಂಭ್ರಮ-50′ ನಿಮಿತ್ತ ಅವರು ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಮೂರನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ 18 ಅರಸು ಮನೆತನಗಳು ಕರ್ನಾಟಕವನ್ನು ಆಳಿವೆ. ಆಗಿನ ಗತವೈಭವ ಹೆಮ್ಮೆ ಪಡುವಂತದ್ದು. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅದಕ್ಕೆ ಹಲ್ಮಡಿ ಶಾಸನವೆ ಸಾಕ್ಷಿ. ಕನ್ನಡದ ಮೊಟ್ಟಮೊದಲ ಗ್ರಂಥ ಕವಿರಾಜ ಮಾರ್ಗ. ಶ್ರೀ ವಿಜಯ ಹೇಳಿದಂತೆ ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಇತ್ತೆಂದು ಹೇಳಿದ್ದಾರೆ. ಆದರೆ ಈಗೇನಾಗಿದೆ ಎಂಬ ವಾಸ್ತವ ಪರಿಸ್ಥಿತಿಯನ್ನು ನೆನೆದು ಖೇದ ವ್ಯಕ್ತಪಡಿಸಿದರು.
ಗೊಟಗೇರಿ ಜಾನಪದ ವಿಶ್ವವಿದ್ಯಾಲಯದ ಅಧ್ಯಾಪಕ ಎಸ್. ನಾಗರಾಜ ಅವರು ಮಾತನಾಡಿ, ಧಾರವಾಡದ ಕೆ. ಇ. ಬೋರ್ಡಿನಲ್ಲಿ ಕಲಿಯುವ ವಿದ್ಯಾರ್ಥಿಗಳು ಪುಣ್ಯವಂತರು. ಅಂಥಾ ಶಕ್ತಿ ಅಲ್ಲಿನ ವಿದ್ಯಾ ಗುರುಗಳಲ್ಲಿದೆ. ಕರ್ನಾಟಕ ಸುವರ್ಣ ಸಂಭ್ರಮದಲ್ಲಿ ನಾಡಿನ ಹಿರಿಯ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ನಾಡು, ನುಡಿ ಕುರಿತು ನವಂಬರ ಇಡೀ ತಿಂಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.
ಗೌರವ ಉಪಸ್ಥಿತಿ ವಹಿಸಿದ್ದ ಮಕ್ಕಳ ಹಿರಿಯ ಸಾಹಿತಿ ನಿಂಗಣ್ಣ ಕುಂಟಿ, ಅನೇಕ ಕನ್ನಡ ಪದ್ಯಗಳನ್ನು ವಾಚಿಸಿ ವಿದ್ಯಾರ್ಥಿಗಳನ್ನು ರಂಜಿಸಿ ಕನ್ನಡದ ಕುರಿತು ಜಾಗೃತಿ ಮೂಡಿಸಿದರು.
ನೆಲದವ್ವ, ಹಡದವ್ವ, ವನದವ್ವ, ನುಡಿಯವ್ವ, ಜಲದವ್ವ ಇಂಥ ಐದು ಅವ್ವಗಳ ಕುರಿತಂತೆ ಅನೇಕ ವೈಚಾರಿಕ ಕನ್ನಡ, ನಾಡು, ನುಡಿ ಗೀತೆಗಳನ್ನು ಹರ್ಲಾಪುರದ ಶಂಭಯ್ಯ ಹಿರೇಮಠ ಹಾಗೂ ಅವರ ತಂಡದ ಬಸವರಾಜ ಕರಡಿ, ಜ್ಯೋತಿ ಯರಗಂಬಳಿಮಠ, ಮಲ್ಲೇಶ ಮುಳಗುಂದ, ಬಸವರಾಜ ಹಿರೇಮಠ ಅತ್ಯಂತ ಮನೋಜ್ಞವಾಗಿ ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿ ಕನ್ನಡದ ಅರಿವು ಮೂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಇ. ಬೋರ್ಡ ಕಾಲೇಜಿನ ಕನ್ನಡ ಉಪನ್ಯಾಸಕ ಬಸವರಾಜ ಉಡಿಕೇರಿ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಹಮ್ಮಿಕೊಂಡ ತಿಂಗಳ ವಿಶೇಷ ಉಪನ್ಯಾಸಗಳು ನಿಜಕ್ಕೂ ಸ್ತುತ್ಯಾರ್ಹ. ಕನ್ನಡ ನಾಡು, ನುಡಿ, ಸಂಸ್ಕøತಿ ಪರಂಪರೆ, ನೆಲ, ಜಲ ಸಂರಕ್ಷಣೆ ಕುರಿತಂತೆ ಏಕೀಕರಣ ಹೋರಾಟದ ಮಹನೀಯರ ಕುರಿತು ಇಂದಿನ ಪೀಳಿಗೆಗೆ ಅರಿಯುವದು ಅಗತ್ಯ ಎಂದರು.
ಸಂಚಾಲಕರಾದ ಗುರು ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಾದ್ಯಕ್ಷ ಬಸವಪ್ರಭು ಹೊಸಕೇರಿ, ಡಾ. ಶ್ರೀಶೈಲ ಹುದ್ದಾರ, ಕೆ.ಜಿ. ದೇವರಮನಿ ಮತ್ತು ಕೆ. ಇ. ಬೊರ್ಡ ಕಾಲೇಜಿನ ಅಧ್ಯಾಪಕ ವೃಂದ ಮತ್ತು ಸಂಘದ ಹಿರಿಯ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.