ಕರ್ನಾಟಕ ವಿಧಾನಸಭೆ ಚುನಾವಣೆ-2023:ಮತದಾನಕ್ಕೆ ಸಕಲ ಸಿದ್ಧತೆ, 12,392 ಪೋಲಿಂಗ್ ಸಿಬ್ಬಂದಿ ನಿಯೋಜನೆ:ಯಶವಂತ ವಿ. ಗುರುಕರ್

ಕಲಬುರಗಿ,ಮೇ.9: ಕರ್ನಾಟಕ ವಿಧಾನಸಭೆಗೆ ಮೇ 10 (ಬುಧವಾರ) ನಡೆಯುವ ಚುನಾವಣೆಗೆ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮತದಾನ ಕಾರ್ಯಕ್ಕೆ ಪಿ.ಆರ್.ಓ-3,098, ಎ.ಪಿ.ಆರ್.ಓ-3,098 ಹಾಗೂ ಪೋಲಿಂಗ್ ಆಫೀಸರ್-6,196 ಸೇರಿದಂತೆ ಒಟ್ಟು 12,392 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಾದ್ಯಂತ ನಗರ ಪ್ರದೇಶದಲ್ಲಿ 710 ಮತ್ತು ಗ್ರಾಮೀಣ ಪ್ರದೇಶದಲ್ಲಿ 1,673 ಸೇರಿದಂತೆ 2,383 ಮತಗಟ್ಟೆ ಸ್ಥಾಪಿಸಲಾಗಿದ್ದು, ಇದರಲ್ಲಿ 56 ವಲ್‍ನರೇಬಲ್ ಮತ್ತು 540 ಕ್ರಿಟಿಕಲ್ ಪೋಲಿಂಗ್ ಸ್ಟೇಷನ್ ಎಂದು ಗುರುತಿಸಿದೆ. 11,21,972 ಪುರುಷರು, 10,95,754 ಮಹಿಳೆಯರು, ಇತರೆ 329 ಹಾಗೂ 916 ಸೇವಾ ಮತದಾರರು ಸೇರಿದಂತೆ ಒಟ್ಟು 22,18,971 ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತ ಚುನಾವಣಾ ಆಯೋಗವು ಇದೇ ಪ್ರಥಮ ಬಾರಿಗೆ ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದ ವಯೋವೃದ್ಧರಿಗೆ ಮತ್ತು ವಿಶೇಷಚೇತನರಿಗೆ ಪೋಸ್ಟಲ್ ಬ್ಯಾಲೆಟ್ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಇದರಲ್ಲಿ ಹೆಸರು ನೊಂದಾಯಿಸಿದವರ ಪೈಕಿ 80 ವರ್ಷ ಮೇಲ್ಪಟ್ಟ 1,294 ಮತ್ತು ವಿಶೇಷಚೇತನರು 243 ಜನ ಮನೆಯಿಂದಲೇ ಮತ ಚಲಾಯಿಸಿದ್ದಾರೆ. ಇನ್ನು ಮತದಾನ ದಿನದಂದು ಕರ್ತವ್ಯದ ಮೇಲಿರುವ 885 ಜನ ಅಗತ್ಯ ಸೇವಾ ಸಿಬ್ಬಂದಿಗಳು ಸಹ ಸಂಬಂಧಿಸಿದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಮತ ಚಲಾಯಿಸಿದ್ದಾರೆ.

ಮತದಾನ ಕಾರ್ಯ ಸುಗಮ ನಿರ್ವಹಣೆಗೆ 207 ಜೀಪು, ಸಾರಿಗೆ ಬಸ್ 247, ಇತರೆ ಖಾಸಗಿ ವಾಹನ 652 ಸೇರಿದಂತೆ 1,106 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕೋವಿಡ್ ಮಾರ್ಗಸೂಚಿಯಂತೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅಗತ್ಯವಿದ್ದ ಕಡೆ ಮತದಾನ ದಿನದಂದು ವಯೋವೃದ್ಧ ಮತ್ತು ವಿಶೇಷಚೇತನ ಮತದಾರರಿಗೆ ಸಾರಿಗೆ ವ್ಯಸವ್ಥೆ ಸಹ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಮಾಹಿತಿ ನೀಡಿದರು.

ಭದ್ರತೆಗೆ 6,367 ಸಿಬ್ಬಂದಿಗಳ ನೇಮಕ: ಮತದಾನವು ಶಾಂತಿಯುತ ನಡೆಯಲು ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಜಿಲ್ಲೆಯಾದ್ಯಂತ 12 ಡಿ.ಎಸ್.ಪಿ., 34 ಸಿ.ಪಿ.ಐ., 59 ಪಿ.ಎಸ್.ಐ., 131 ಎ.ಎಸ್.ಐ., 2,016 ಪಿ.ಸಿ. ಮತ್ತು ಸಿ.ಹೆಚ್.ಸಿ., 1,237 ಗೃಹ ರಕ್ಷಕ ದಳ ಸಿಬ್ಬಂದಿ, ಸಿ.ಪಿ.ಎಂ.ಎಫ್. ಸಿಬ್ಬಂದಿ-648, ಕೆ.ಎಸ್.ಆರ್.ಪಿ 10 ತುಕಡಿ, ಕೇಂದ್ರ ಸರ್ಕಾರದಿಂದ 21 ಎಸ್.ಎ.ಪಿ/ ಸಿ.ಎ.ಪಿ.ಎಫ್ ಪ್ಯಾರಾ ಮಿಲಿಟರಿ ಕಂಪನಿಗಳು ಸೇರಿದಂತೆ ಒಟ್ಟಾರೆ 6,367 ಭದ್ರತಾ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

   ಮೂಲಸೌಕರ್ಯ ಖಾತ್ರಿ: ಈ ಬಾರಿ ಮತದಾನ ದಿನದಂದು ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನ ಪಾರ್ಕಿಂಗ್, ನೆರಳು, ವಿಶ್ರಾಂತಿ ಕೋಣೆದಂತಹ ಮೂಲಸೌಕರ್ಯ ವ್ಯವಸ್ಥೆ ಇರುವಿಕೆಯನ್ನು ಖಾತ್ರಿಪಡಿಸಿಕೊಳ್ಳಲಾಗಿದೆ. ವಿಶೇಷಚೇತನರಿಗೆ ರ್ಯಾಂಪ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

72 ವೈವಿಧ್ಯಮಯ ಮತಗಟ್ಟೆಗಳು: ಮಹಿಳೆಯರು, ವಿಶೇಷಚೇತನರು ಹಾಗೂ ಯುವ ಸಮೂಹವನ್ನು ಮತಗಟ್ಟೆಯತ್ತ ಆಕರ್ಷಿಸಲು ಜಿಲ್ಲೆಯಾದ್ಯಂತ 72 ಮತಗಟ್ಟೆಗಳು ವಿವಿಧ ಬಣ್ಣಗಳಿಂದ ಸಿಂಗಾರಗೊಳ್ಳುತ್ತಿವೆ. ವಿಶೇಷವಾಗಿ ಮಹಿಳಾ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಬಾ ಕ್ಷೇತ್ರಕ್ಕೆ 5 ರಂತೆ ಜಿಲ್ಲೆಯಾದ್ಯಂತ 45 ಮಹಿಳಾ ಸಖಿ ಪಿಂಕ್ ಬೂತ್ ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಮಹಿಳೆಯರು ಇರಲಿದ್ದಾರೆ. ಅದೇ ರೀತಿ ಜಿಲ್ಲೆಯ ಪ್ರತಿ ವಿಧಾನಸಭೆಗೆ ತಲಾ ಒಂದರಂತೆ ಯುವ ಬೂತ್, ವಿಶೇಷಚೇತನ ಬೂತ್ ಹಾಗೂ ಸ್ಥಳೀಯ ಇತಿಹಾಸ, ಮಹಿಮೆ ಸಾರುವ ಸಾರುವ ವಿಶೇಷ ಬೂತ್‍ಗಳು ಮತದಾರರನು ಸೆಳೆಲಿವೆ.

ವೆಬ್ ಕಾಸ್ಟ್: ಜಿಲ್ಲೆಯಾದ್ಯಂತ 1,345 ವಲನರೇಬಲ್ ಮತ್ತು ಕ್ರಿಟಿಕಲ್ ಮತಗಟ್ಟೆಯಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಕುಳಿತಲ್ಲೆ ಈ ಮತಗಟ್ಟೆಗಳ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಬಹುದಾಗಿದೆ.

ಕಣದಲ್ಲಿ 105 ಜನ ಅಭ್ಯರ್ಥಿಗಳು: ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 105 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕ್ಷೇತ್ರವಾರು ನೋಡುವುದಾದರೆ ಅಫಜಲಪೂರ-10, ಜೇವರ್ಗಿ-15, ಚಿತ್ತಾಪುರ-7, ಸೇಡಂ-12, ಚಿಂಚೋಳಿ-10, ಗುಲಬರ್ಗಾ ಗ್ರಾಮೀಣ-12, ಗುಲಬರ್ಗಾ ದಕ್ಷಿಣ-14, ಗುಲಬರ್ಗ ಉತ್ತರ-12 ಹಾಗೂ ಆಳಂದ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.