ಕರ್ನಾಟಕ ರೈತ ಸುರಕ್ಷತಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ:ರೈತರು ನೋಂದಣಿ ಮಾಡಿಕೊಳ್ಳಲು ಜು. 31 ಕೊನೆಯ ದಿನ

ಕಲಬುರಗಿ.ಜೂ.9: 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷತಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ಚಿತ್ತಾಪುರ ತಾಲೂಕಿನ ರೈತರು ವಿವಿಧ ಬೆಳೆಗಳಿಗೆ ವಿಮಾ ನೋಂದಣಿ ಮಾಡಿಕೊಳ್ಳಲು 2021ರ ಜುಲೈ 31 ಕೊನೆಯ ದಿನವಾಗಿದೆ ಎಂದು ಚಿತ್ತಾಪುರ ಕೃಷಿ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬೆಂಗಳೂರಿನ ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿಯನ್ನು ನಿಗದಿಪಡಿಸಲಾಗಿದೆ. ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ (ಮಳೆಯಾಶ್ರಿತ) ಬೆಳೆಗಳಿಗೆ ಹಾಗೂ ಭತ್ತ, ಸೋಯಾ ಅವರೆ (ನೀರಾವರಿ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2021ರ ಜುಲೈ 31 ಕೊನೆಯ ದಿನವಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಥವಾ ಸ್ಥಳ ನಿರ್ದಿಷ್ಟ, ಪ್ರಕೃತಿ ವಿಕೋಪಗಳಾದ ಅಲ್ಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘಾ ಸ್ಪೋಟ ಹಾಗೂ ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಗಡ ಸಂದರ್ಭದಲ್ಲಿ ಬೆಳೆ ನಷ್ಟ ಉಂಟಾದಲ್ಲಿ ರೈತರು ಬೆಳೆ ವಿಮೆಯ ಸದುಪಯೋಗ ಪಡೆಯಬಹುದಾಗಿದೆ.

ರೈತರು ಬೆಳೆವಾರು ವಿಮಾ ಮೊತ್ತ ಹಾಗೂ ಉಳಿದ ಬೆಳೆಗಳ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ನೋಂದಣಿಗಾಗಿ ಹತ್ತಿರದ ಬ್ಯಾಂಕುಗಳಿಗೆ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಪರ್ಕಿಸಲು ಕೋರಲಾಗಿದೆ.