ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಅಸ್ತಿತ್ವಕ್ಕೆ: ಹುಲಿಕಲ್ ನಟರಾಜ್

ಕಲಬುರಗಿ:ಏ.01: ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಅಸ್ತಿತ್ವಕ್ಕೆ ತರಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಅವರು ಇಲ್ಲಿ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಸಮಿತಿಗಳನ್ನು ರಚಿಸಲಾಗುವುದು ಎಂದರು.
ಈಗಾಗಲೇ ಕೇವಲ ಎರಡು ತಿಂಗಳಲ್ಲಿಯೇ ಸುಮಾರು 32000 ಜನರು ಪರಿಷತ್ತಿನ ಸದಸ್ಯತ್ವ ನೊಂದಣಿ ಮಾಡಿಕೊಂಡಿದ್ದಾರೆ. ಬರುವ ಜೂನ್ 5ರವರೆಗೆ ಒಂದು ಲಕ್ಷ ಸದಸ್ಯತ್ವ ಅಭಿಯಾನಾದ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ವಿಜ್ಞಾನದೆಡೆಗೆ ಮನದ ನಡಿಗೆ ಎಂಬ ಕಲ್ಪನೆಯೊಂದಿಗೆ ಪ್ರಜ್ಞಾವಂತಿಕೆಯನ್ನು ಬೆಳೆಸುವುದು, ಕಂದಾಚಾರ, ವಾಮಾಚಾರ, ಭಾನಾಮತಿ ಹೀಗೆ ಅನೇಕ ಮೌಡ್ಯಗಳ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸ್ತ್ರೀ ವಶೀಕರಣದ ಕುರಿತು ಕೆಲ ಜ್ಯೋತಿಷಿಗಳು, ಮಂತ್ರವಾದಿಗಳು ಉಪದೇಶ ನೀಡುತ್ತಿರುವ ಕುರಿತು ದೂರುಗಳು ಬಂದಿವೆ. ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುವ ಚಿಂತನೆ ನಡೆಸಿದ್ದೇನೆ. ಈ ಕುರಿತು ಕಾನೂನು ಪಂಡಿತರೊಂದಿಗೆ ಸಲಹೆ ಪಡೆದು ಕಾನೂನು ಹೋರಾಟ ಮಾಡುವುದಾಗಿಯೂ ಅವರು ಹೇಳಿದರು.
ದುರ್ಬಲ ಮನಸ್ಸು ಗಟ್ಟಿಗೊಳಿಸಿ ಮನ ಧ್ವನಿಯಾಗಿ ಅವರ ಬೆಂಬಲಕ್ಕೆ ನಿಲ್ಲಲಾಗುವುದು. ಮೌಢ್ಯತೆಯಿಂದ ಮೋಸ ಹೋದ ಬಡ ಕುಟುಂಬಕ್ಕೆ ಧ್ವನಿಯಾಗಿ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎಂ. ನಾಗಮೋಹನ್‍ದಾಸ್, ಇಸ್ರೋದ ಕಿರಣಕುಮಾರ್, ನಿವೃತ್ತ ಪೋಲಿಸ್ ವರಿಷ್ಠಾಧಿಕಾರಿ ಎಂ. ಉಮೇಶ್ ಮತ್ತು ಲೋಕೇಶ್ ಅವರು ಮಾರ್ಗದರ್ಶನ ಮಾಡುತ್ತಿದ್ದು, ಇದೊಂದು ನಾಡಿನ ಹೆಮ್ಮೆಯ ಸಂಸ್ಥೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗೀತಾ ಶಾಂತಕುಮಾರ್, ರವೀಂದ್ರ ಶಾಬಾದಿ, ಬಸವರಾಜ್ ಚಟ್ನಳ್ಳಿ, ಡಾ. ಶಿವರಂಜನ್ ಸತ್ಯಂಪೇಟೆ, ಶರಣಬಸವ ಕಲ್ಲಾ, ರೇಣುಕಾ ಸಿಂಗೆ, ಸತೀಶ್ ಸಜ್ಜನ್, ಪರಮೇಶ್ವರ್ ಶೆಟಗಾರ್, ಅಯ್ಯಣ್ಣ ನಂದಿ ಮುಂತಾದವರು ಉಪಸ್ಥಿತರಿದ್ದರು.