ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಕೊಳಗೇರಿಗಳಿಗೆ ಮನೆಗಳ ಮಂಜೂರು ಮಾಡುವ ಹೊಣೆ ಯಾರದ್ದು..?
ಲಿಂಗಸುಗೂರು.ನ.೫- ತಾಲೂಕಿನ ಕೊಳಗೇರಿ ಪ್ರದೇಶಗಳ ಫಲಾನುಭವಿಗಳಿಗೆ ೨೦೨೦-೨೧ನೇ ಸಾಲಿನಲ್ಲಿ ಮನೆಗಳ್ನು ಮಾಡಿಸುವ ಹೊಣೆ ಯಾರದ್ದು? ಶಾಸಕರೋ, ಸಂಸದರೋ, ವಿಧಾನಪರಿಷತ್ ಸದಸ್ಯರೋ? ಎಂದು ಪ್ರಶ್ನಿಸುವ ಮೂಲಕ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು.
ಸಹಾಯಕ ಆಯುಕ್ತ ರಾಜಶೇಖರ ಡಂಬಳ್‌ರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಅವರು, ಸರಕಾರದಿಂದ ಮಂಜೂರಾಗುವ ಕೊಳಗೇರಿ ನಿವಾಸಿಗಳ ಹಕ್ಕಾಗಿರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಲಭ್ಯ ದಾಖಲಾತಿಗಳ ಪ್ರಕಾರ ಕರ್ನಾಟಕ ಕೊಳಗೇರಿ ಪ್ರದೇಶಾಭಿವೃದ್ಧಿ ಮಂಡಳಿಯಿಂದ ರಾಜ್ಯದೆಲ್ಲೆಡೆ ಆಯ್ಕೆಯಾದ ವಿಧಾನಸಭಾ ಕ್ಷೇತ್ರಗಳ ಕೊಳಗೇರಿಗಳಲ್ಲಿ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಜುಲೈ ೨೪, ೨೦೨೦ರಂದು ಟೆಂಡರ್ ಕರೆಯಲಾಗಿತ್ತು.
ಆದರೆ, ಶಾಸಕ ಡಿ.ಎಸ್.ಹೂಲಗೇರಿಯವರು ೨೯/೮/೨೦೨೦ ಕಲಬುರಗಿಯಲ್ಲಿನ ಕರ್ನಾಟಕ ಕೊಳಗೇರಿ ಪ್ರದೇಶಾಭಿವೃದ್ಧಿ ಮಂಡಳಿಯ ವಿಭಾಗೀಯ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಮನೆಗಳ ನಿರ್ಮಾಣ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಸದರಿ ಕಚೇರಿಯ ಸ್ವೀಕೃತಿ ದಿನಾಂಕ ೨೯/೯/೨೦೨೦ ಎಂದು ಇದೆ. ಅಂದರೆ, ಶಾಸಕರು ಟೆಂಡರ್ ಆದ ಎರಡು ತಿಂಗಳ ಬಳಿಕ ತಮ್ಮ ಕ್ಷೇತ್ರದಲ್ಲಿರುವ ಲಿಂಗಸುಗೂರು ಪಟ್ಟಣದ ೫ ವಾರ್ಡ್‌ಗಳು, ಮುದಗಲ್ ಪಟ್ಟಣದ ಒಂದು ವಾರ್ಡ್ ಕೊಳಚೆ ಪ್ರದೇಶವೆಂದು ಘೋಷಣೆಯಾಗಿದ್ದು, ನಿವೇಶನ ರಹಿತ ಕುಟುಂಬಗಳಿಗೆ ಮನೆಗಳ ನಿರ್ಮಾಣ ಮಾಡಿಕೊಡುವಂತೆ ಕೋರಿದ್ದಾರೆ. ಸಮಯದ ವಿಳಂಬದಿಂದ ಲಿಂಗಸುಗೂರು ಕ್ಷೇತ್ರದ ಕೊಳಗೇರಿ ಪ್ರದೇಶನ ಫಲಾನುಭವಿಗಳು ಮನೆಯಿಂದ ವಂಚಿತರಾಗಿದ್ದಾರೆ.
ಜನಪ್ರತಿನಿಧಿಗಳ ವಿಳಂಬ ಧೋರಣೆಯಿಂದ ಫಲಾನುಭವಿಗಳು ಮನೆಗಳಿಂದ ವಂಚಿತರಾಗಿ, ಕೊಳಚೆ ಪ್ರದೇಶದಲ್ಲಿ ಜಾನುವಾರುಗಳಿಗಿಂದ ಕಡೆಯದಾಗಿ ಮುರುಕಲು ಶೆಡ್ಡು, ಗುಡಿಸಲುಗಳಲ್ಲೇ ವಾಸಿಸುತ್ತಿರುವದು ಮಾನವ ಸಮಾಜ ತಲೆ ತಗ್ಗಿಸುವಂಥಹ ವಿಷಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಮನೆ-ಮನೆಗೆ ಹೋಗಿ ಕೈ-ಕಾಲು ಮುಗಿದು ಮತಭಿಕ್ಷೆ ಪಡೆಯುವ ಮುಖಂಡರುಗಳಿಗೆ, ಜನಪ್ರತಿನಿಧಿಗಳಿಗೆ ಚುನಾವಣೆ ಬಳಿಕ ಬಡವರ ನೆನಪಾಗುವುದು ಮಾತ್ರ ವಿರಳ. ಪ್ರತಿನಿಧಿಗಳು ಕೊಳಚೆ ಪ್ರದೇಶಗಳಿಗೆ ಮನೆಗಳನ್ನು ಮಂಜೂರು ಮಾಡಿಸಲು ವಿಫಲರಾಗಿರುವುದು ದಾಖಲಾತಿಗಳಿಂದಲೇ ಸಾಬೀತಾಗುತ್ತದೆ.
ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ಸೌಲಭ್ಯ ವಂಚಿತ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಸಮಿತಿಯ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ತಾಲೂಕು ಸಂಚಾಲಕ ನಾಗರಾಜ ಹಾಲಭಾವಿ, ಸಾಮಾಜಿಕ ಜಾಲತಾಣದ ತಾಲೂಕು ಸಂಚಾಲಕ ಅಕ್ರಂಪಾಷಾ, ಮೌನೇಶ ಗುಡದನಾಳ, ಅಮರೇಶ ಹೊಸಮನಿ, ಪರಶುರಾಮ ಗುಡಿಜಾವೂರು, ಅಂಬು ಗುರುಗುಂಟ, ಶೀಲಪ್ಪ ಚಿತಾಪೂರ, ಹುಸೇನಪ್ಪ ತರಕಾರಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.