ಕರ್ನಾಟಕ ರಾಜ್ಯಮಸಣ ಕಾರ್ಮಿಕರ ನೇಮಕಕ್ಕೆ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.18: ಮಸಣ ಕಾರ್ಮಿಕರನ್ನು ಪ್ರತಿ ಮಸಣಕ್ಕೊಬ್ಬರಂತೆ ಮಸಣ ಕಾವಲುಗಾರರು ಅಥವಾ ಮಸಣ ನಿರ್ವಾಹಕರನ್ನಾಗಿ ನೇಮಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದೆ.
ಸಂಘದ ಮುಖಂಡರು, ಸದಸ್ಯರು ಇಂದು  ತಾಲೂಕು ಪಂಚಾಯ್ತಿಯಲ್ಲಿ ಮನವಿ ಸಲ್ಲಿಸಿ. ಬಹುತೇಕ ಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಮಸಣ ಕಾರ್ಮಿಕರಾದ ನಾವುಗಳು ಸಂಘಟಿತರಾಗಿ, ಸಾವಿರಾರು ವರ್ಷಗಳಿಂದ ನಮಗಾದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಲು ಕೋರಿ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಸರಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಾವು ಬದುಕುತ್ತಿರುವ ದಯನೀಯ ಸ್ಥಿತಿ ಮತ್ತು  ಬಿಟ್ಟಿ ಚಾಕರಿಯಿಂದ ಇದುವರೆಗೆ ಮುಕ್ತಿ ನೀಡಲಿಲ್ಲ.
ನಾವು ಪ್ರತಿ ತಾಲೂಕಾ ಪಂಚಾಯತ್ ಪ್ರದೇಶದಲ್ಲಿ ಸಾವಿರದಷ್ಠು ಕುಟುಂಬಗಳಿದ್ದೇವೆ.
ಮಸಣಗಳನ್ನು ನಾವುಗಳೇ ನಿಯಮಿತವಾಗಿ ಬಿಟ್ಟಿಯಾಗಿ ವಂಶ ಪಾರಂಪರ್ಯವಾಗಿ ನಿರ್ವಹಿಸುತ್ತಾ ಬಂದಿದ್ದೇವೆ. ನಾಗರೀಕರ ಶವಗಳನ್ನು ಹೂಳಲು ಮಸಣಗಳಿಗೆ ಬರುವವರಿಗೆ ಹಾದಿ ನಿರ್ಮಿಸುವುದು, ಕುಳಿತುಕೊಳ್ಳಲು ಬಯಲು ಸ್ಥಳ ಮಾಡಿ ಕೊಡುವುದು ಮುಂತಾಗಿ, ಈ ಎಲ್ಲ ಕೆಲಸಗಳು ಉಚಿತವೇ ಆಗಿವೆ.  ಮಸಣಗಳ ಕೆಲಸದಲ್ಲಿ ತೊಡಗಲು ಕೊಡುವ ಸಹಾಯವನ್ನೇ  ಕೂಲಿಯೆಂದು ಪರಿಗಣಿಸಲಾಗಿದೆ.
ಗ್ರಾಮ ಪಂಚಾಯತ್ ಅಥವಾ ಯಾವುದೇ ಸ್ಥಳೀಯ ಸಂಸ್ಥೆಗಳು ಮಸಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮವಹಿಸುತ್ತಿಲ್ಲ.  ಈ ಬಿಟ್ಟಿ ಚಾಕರಿಯಿಂದ ನಮಗೆ ಮುಕ್ತಿ ಬೇಕಾಗಿದೆ.  ನಮ್ಮನ್ನು ಮಸಣಕ್ಕೊಬ್ಬರಂತೆ ಮಸಣ ನಿರ್ವಾಹಕರೆಂದು ನೇಮಿಸಿಕೊಳ್ಳುವ ಮೂಲಕ ಉದ್ಯೋಗ ಭದ್ರತೆ ಮತ್ತು ವೇತನ ನೀಡುವ,  ಪ್ರತಿ ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿಯ ಉದ್ಯೋಗವೆಂದು ಪರಿಗಣಿಸಿ, ಕುಣಿ ಅಗೆಯುವ ಮತ್ತು ಮುಚ್ಚುವ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ 3,000 ರೂಗಳ ಕೂಲಿಯನ್ನು ಪಾವತಿಸಬೇಕು
ಸೇರಿದಂತೆ  ಇತರೆ ಹಕ್ಕೊತ್ತಾಯಗಳ ಈಡೇರಿಸಬೇಕೆಂದಿದ್ದಾರೆ.