ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹುತಾತ್ಮ ದಿನ ಆಚರಣೆ

ವಿಜಯಪುರ, ಮಾ.25-ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ದೇಶಕಂಡ ಅಪ್ರತಿಮ ಕ್ರಾಂತಿಕಾರ ಭಗತಸಿಂಗ ಅವರ ಹುತಾತ್ಮ ದಿನವನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಆಚರಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ ಭಾರತ ಮಾತೆಯನ್ನು ದಾಸ್ಯದಿಂದ ಮುಕ್ತಿಗೊಳಿಸಲು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿದ ಮಹಾನ ಕ್ರಾಂತಿಕಾರಿಗಳಾದ ಭಗತಸಿಂಗ್, ರಾಜಗುರು, ಸುಖದೇವ ಬ್ರಿಟಿಷರ ಎದೆ ನಡುಗಿಸಿದ ಮಹಾನವೀರರು. ಜಲಿಯನ್ ವಾಲಾಬಾಗ್‍ನಲ್ಲಿ ಬ್ರಿಟಿಷÀರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು.
ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಿದ ಪ್ರಯುಕ್ತ ರಾಷ್ಟ್ರವಿಮೋಚನೆಯೊಂದೇ ತನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ – ಸ್ವಾತಂತ್ರ್ಯ. ಅದೊಂದೇ ನನ್ನ ಕನಸು” ಎಂಬ ಸರಭ್‍ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್‍ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವಂತಹ ಗುಣವನ್ನು ಮೈಗೂಡುವಂತೆ ಮಾಡಿತ್ತು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ ಮಾತನಾಡಿ ಬ್ರಿಟಿಷರಿಂದ ದಮನಗೊಂಡು ಜೈಲು ಸೇರಿದ ಭಗತಸಿಂಗರು 23 ನೇ ವಯಸ್ಸಿನಲ್ಲಿ ನೇಣುಗಂಭ ಏರಿದ ಭಗತಸಿಂಗರು ಪುಸ್ತಕ ಪ್ರಿಯರಾಗಿದ್ದರು. ದೇಶದ ಕ್ರಾಂತಿಕಾರಿ ಅಮೂಲ್ಯ ಮೂರು ರತ್ನಗಳನ್ನು ಎಂದಿಗೂ ಮರೆಯುವಂತಿಲ್ಲ ಎಂದರು.
ಜಿಲ್ಲಾ ಸಂಚಾಲಕ ಎಂ.ಎಂ. ಖಲಾಸಿ ಮಾತನಾಡಿ ಭಗತಸಿಂಗರು ದೇಶದ ಯುವ ಪೀಳಿಗೆಗೆ ಆದರ್ಶ ಪ್ರೇರಣೆಯಾಗಿದ್ದರು. ಇಂದಿನ ಯುವಕರು ಅವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ದೇಶದ ಸಮಗ್ರತೆ ಐಕ್ಯತೆ ಒಗ್ಗೂಡಿ ದೇಶದ ಘನತೆ ಗೌರವವನ್ನು ಉಳಿಸಲು ಪಣತೊಡಬೇಕು ಎಂದರು.
ಈ ಸಂದರ್ಭದಲ್ಲಿ ವಸಂತರಾವ ಕುಲಕರ್ಣಿ, ಭೀಮಾಶಂಕರಯ್ಯ ವಿರಕ್ತಮಠ, ಬಾಸು ರಾಠೋಡ, ಬಾಬು ಲಮಾಣಿ ಸಾಹೇಬಲಾಲ ದಳವಾಯಿ, ಎಸ್.ಜಿ. ದಳವಾಯಿ, ಸಲೀಮ ಮಮದಾಪೂರ, ಲಕ್ಷ್ಮಣ ದೆವಾಪೂರ ಮುಂತಾದವರು ಉಪಸ್ಥಿತರಿದ್ದರು.