ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಮೋಹನ ಕುಲಕರ್ಣಿಗೆ ಸನ್ಮಾನ

ವಿಜಯಪುರ, ಆ.5-ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತ ಮೋಹನ ಕುಲಕರ್ಣಿ ನೇಮಕಗೊಂಡಿದ್ದಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹರ್ಷ ವ್ಯಕ್ತಪಡಿಸಿದೆ.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪತ್ರಕರ್ತ ಮೋಹನ ಕುಲಕರ್ಣಿ ಅವರನ್ನು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಟಿ.ಚೂರಿ ಮಾತನಾಡಿ, ಬಹಳ ವರ್ಷಗಳ ನಂತರ ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿಯಲ್ಲಿ ಸರಕಾರ ವಿಜಯಪುರ ಜಿಲ್ಲೆಗೆ ಪ್ರಾತಿನಿದ್ಯ ನೀಡಿ ಹಿರಿಯ ಪತ್ರಕರ್ತ ಮೋಹನ ಕುಲಕರ್ಣಿ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವುದು ನಮ್ಮೆಲ್ಲರಿಗೂ ತುಂಬಾ ಸಂತಸವನ್ನುಂಟು ಮಾಡಿದೆ ಎಂದರು.

ಸದಸ್ಯರಾಗಿ ಮೋಹನ ಕುಲಕರ್ಣಿ ಅವರು ತಮ್ಮ ಅವಧಿಯಲ್ಲಿ ಮಾಧ್ಯಮ ಮಾನ್ಯತಾ ಸಮಿತಿಯ ಮೂಲಕ ಈ ಭಾಗದ ಅರ್ಹ ಪತ್ರಕರ್ತರಿಗೆ ಮಾಧ್ಯಮ ಮಾನ್ಯತಾ ಕಾರ್ಡ್ ಸೇರಿದಂತೆ ಸರಕಾರದ ವಿವಿಧ ಸೌಳಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಆಶಿಸಿದರು.

ಮಾಧ್ಯಮ ಮಾನ್ಯತಾ ಸಮಿತಿಗೆ ಮೋಹನ ಕುಲಕರ್ಣಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ಕಾನಿಪ ಸಂಘದ ಪರವಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಂಗಮೇಶ ಚೂರಿ ಹೇಳಿದರು.

ಸಂಘದ ರಾಜ್ಯ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಸಲಹಾ ಸಮಿತಿ ಸದಸ್ಯರಾದ ಶರಣು ಮಸಳಿ, ಸೀತಾರಾಮ ಕುಲಕರ್ಣಿ, ರಾಜು ಕೊಂಡಗೂಳಿ, ದೇವೇಂದ್ರ ಹೆಳವರ, ಸಚೇಂದ್ರ ಲಂಬು ಅವರು ಮಾತನಾಡಿ, ಇಪ್ಪತ್ತು ವರ್ಷಗಳ ನಂತರ ಮಾಧ್ಯಮ ಮಾನ್ಯತಾ ಸಮಿತಿಯಲ್ಲಿ ಈ ಜಿಲ್ಲೆಗೆ ಅವಕಾಶ ದೊರೆತಿದ್ದು ಹೆಮ್ಮೆಯ ವಿಷಯ. ಹಾಗೆಯೇ ಸಂಘದ ಪ್ರಧಾನ ಕಾರ್ಯದರ್ಶಿ ಸದಸ್ಯರಾಗಿ ನೇಮಕಗೊಂಡಿರುವುದು ಸಂಘಕ್ಕೂ ಒಂದು ಹಿರಿಮೆ ಎಂದರು.

ಸಂಘದ ಖಜಾಂಚಿ ರಾಹುಲ ಆಪ್ಟೆ, ಸಹಖಜಾಂಚಿ ದೀಪಕ ಶಿಂತ್ರೆ, ಸಂಘದ ಸದಸ್ಯರಾದ ಕುಮಾರಿ ಗಿರಿಜಾ ಕನಮಡಿ, ದೇವಪ್ಪ ಮೇತ್ರಿ, ನಿಂಗಪ್ಪ ಸಂಗಾಪೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.