ಕರ್ನಾಟಕ- ಮಹಾ ಗಡಿ ವಿವಾದ ನಾಳೆ ಸುಪ್ರೀಂನಲ್ಲಿ ವಿಚಾರಣೆ

ಬೆಂಗಳೂರು,ನ.೨೨- ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಾಳೆ ನಡೆಯಲಿದೆ.ಮಹಾರಾಷ್ಟ್ರ ಸರ್ಕಾರ ೧೯೫೬ರ ರಾಜ್ಯ ಪುನರ್‌ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ೨೦೦೪ರಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ೧೮ ವರ್ಷಗಳ ಬಳಿಕ ನಾಳೆ ಸುಪ್ರೀಂಕೋರ್ಟ್‌ನಲ್ಲಿ ಆರಂಭವಾಗಲಿದೆ.ಬೆಳಗಾವಿ, ಬೀದರ್, ದಾಲ್ಕಿ, ಕಾರವಾರ ಸೇರಿದಂತೆ ೮೬೫ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಮಹಾರಾಷ್ಟ್ರದ ವಾದವಾಗಿದೆ.ಭಾಷಾವಾರು ಪ್ರಾಂತ್ಯ ರಚನೆಗೆ ೧೯೫೩ರಲ್ಲಿ ರಚಿಸಲಾಗಿದ್ದ ಫಜಲ್‌ಅಲಿ ನೇತೃತ್ವದ ಮೂವರ ಸದಸ್ಯರ ಸಮಿತಿ ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿ ಸೇರಿದಂತೆ ೮೬೫ ಹಳ್ಳಿಗಳು ಆಗಿನ ಮೈಸೂರು ರಾಜ್ಯಕ್ಕೆ ಸೇರಿದ್ದವು ಎಂದು ವರದಿ ನೀಡಿತ್ತು. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ೧೯೬೬ರಲ್ಲಿ ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗವು ಬೆಳಗಾವಿ ಸೇರಿ ೮೬೫ ಹಳ್ಳಿಗಳು ಕರ್ನಾಟಕಕ್ಕೆ ಸೇರಿದ್ದು ಎಂದು ವರದಿ ನೀಡಿತ್ತು. ಈ ವರದಿಯನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ ೨೦೦೪ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.ಕರ್ನಾಟಕ ಗಡಿ ವಿವಾದ ಮುಗಿದ ಅಧ್ಯಾಯ, ಮಹಾಜನ್ ವರದಿಯೇ ಅಂತಿಮ ಎಂಬ ನಿಲುವನ್ನು ಹೊಂದಿದೆ. ನಾಳೆ ಸುಪ್ರೀಂಕೋರ್ಟ್‌ನಲ್ಲಿ ಗಡಿ ವಿಚಾರದ ಅರ್ಜಿ ವಿಚಾರಣೆಯ ಮೂಲಕ ಈಗ ಮತ್ತೆ ಎರಡೂ ರಾಜ್ಯಗಳ ನಡುವೆ ಗಡಿ ಕದನ ಆರಂಭವಾಗಿದೆ.
ಎರಡೂ ರಾಜ್ಯಗಳಿಂದಲೂ ಸಿದ್ಧತೆ
ಗಡಿ ವಿವಾದದ ವಿಚಾರಣೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳು ಕಾನೂನು ಹೋರಾಟಕ್ಕೆ ಸಂಪೂರ್ಣ ಸಿದ್ಧತೆ ನಡೆಸಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಉನ್ನತಮಟ್ಟದ ಸಭೆ ನಡೆಸಿ ಗಡಿ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಲು ಮಾಜಿ ಅಡ್ವೊಕೇಟ್ ಜನರಲ್ ಮುಕುಲ್ ರೋಹಟಗಿ, ಹಿರಿಯ ವಕೀಲರಾದ ಶ್ಯಾಂ ದಿವಾನ್, ಉದಯಹೊಳ್ಳ, ಮಾರುತಿ ಜಿರಲೆ, ರಘುಪತಿ ಇವರುಗಳ ತಂಡವನ್ನು ರಚಿಸುವ ತೀರ್ಮಾನವನ್ನು ಕೈಗೊಂಡಿದ್ದರು.ಮಹಾರಾಷ್ಟ್ರ ಸರ್ಕಾರ ಸಹ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಾದ ಮಂಡಿಸಲು ಸಂಪೂರ್ಣ ತಯಾರಿ ನಡೆಸಿದ್ದು, ಕಳೆದ ಶನಿವಾರವೇ ಅಲ್ಲಿನ ಮುಖ್ಯಮಂತ್ರಿ ಏಕ್‌ನಾಥ್‌ಶಿಂಧೆ ಅವರು ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ ಮಹಾರಾಷ್ಟ್ರದ ಸಚಿವರುಗಳಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜೇ ದೇಸಾಯಿ ಇವರುಗಳನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸುವ ತೀರ್ಮಾನ ಕೈಗೊಂಡು ಸಮರ್ಥ ವಾದ ಮಂಡನೆಗೆ ಹಿರಿಯ ವಕೀಲರ ತಂಡ ರಚನೆ ಹಾಗೂ ನ್ಯಾಯಾಲಯದ ವಿಚಾರಣೆ ಬಳಿಕ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್ ಶಾರವರನ್ನು ಭೇಟಿ ಮಾಡುವ ಬಗ್ಗೆಯೂ ತೀರ್ಮಾನಗಳನ್ನು ಮಾಡಿದೆ.