ಕರ್ನಾಟಕ ಭವನ ಕಾಮಗಾರಿ ಸಿ.ಎಂ. ಪರಿಶೀಲನೆ

೧೫ ಎ ೧ ತಿರುಮಲ ವೆಂಕಟೇಶ್ವರ ದೇವಾಲಯದ ಹಿಂಭಾಗದಲ್ಲಿ ೨೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನ ಕಟ್ಟಡ ಕಾಮಗಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲಿಸಿದರು. ಸಚಿವರಾದ ಸುಧಾಕರ್, ಮುನಿರತ್ನ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಟಿಟಿಡಿ ಸದಸ್ಯ ಎಂ.ಎನ್. ಶಶಿಧರ್, ಮತ್ತಿತರರು ಇದ್ದಾರೆ.

ಬೆಂಗಳೂರು, ನ. ೧೫- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಮತಿಯಲ್ಲಿ ತಿರುಮಲ ಶ್ರೀ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದು, ತಿರುಮಲದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನ ಕಟ್ಟಡ ಕಾಮಗಾರಿಗಳನ್ನು ಪರಿಶೀಲಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ತಿರುಮತಿಯಲ್ಲಿ ನಡೆದ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡು ತಿರುಪತಿಯಲ್ಲೇ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿಗಳು ಇಂದು ಬೆಳಿಗ್ಗೆಯೇ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ದೇವರ ದರ್ಶನದ ನಂತರ ಮುಖ್ಯಮಂತ್ರಿಗಳು ತಿರುಮಲದಲ್ಲಿ ೨೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ಕಟ್ಟಡ ಕಾಮಗಾರಿಗಳ ಪರಿಶೀಲನೆ ನಡೆಸಿ, ಆದಷ್ಟು ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕರ್ನಾಟಕ ಭವನವನ್ನು ಲೋಕಾರ್ಪಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಡಾ. ಕೆ. ಸುಧಾಕರ್, ಮುನಿರತ್ನ, ಬಿಡಿಎ ಅಧ್ಯಕ್ಷ ಹಾಗೂ ಟಿಟಿಡಿ ಸದಸ್ಯ ಹೆಚ್.ಆರ್. ವಿಶ್ವನಾಥ್, ಟಿಟಿಡಿಯ ಸದಸ್ಯರಾದ ಎಂ.ಎಸ್. ಶಶಿಧರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.