ಕರ್ನಾಟಕ ಬಂದ್ ಗೆ‌ ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ; ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೨೯; ತಮಿಳುನಾಡಿಗೆ ಕಾವೇರಿ ನದಿಯ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಲಾಗಿದ್ದ ದಾವಣಗೆರೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟ ದಾವಣಗೆರೆ ಬಂದ್ ಮಾಡಲು ಕರೆ ನೀಡಿತ್ತು. ಅದರಂತೆ  ವಿವಿಧ ಕನ್ನಡ ಪರ ಸಂಘಟನೆಗಳು ಬೆಳಿಗ್ಗೆಯಿಂದಲೇ ನಗರದ ವಿವಿಧ ಕಡೆಗಳಲ್ಲಿ ಸಂಚಾರ ಮಾಡಿ ಬಂದಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.ದಾವಣಗೆರೆಯಲ್ಲಿನ ಬಹುತೇಕ ಹೋಟೆಲ್ ಗಳು ಬಂದ್ ಆಗಿದ್ದವು, ಆದರೆ, ಖಾಸಗಿ ಬಸ್ ಹಾಗೂ ನಗರ ಸಾರಿಗೆ, ಕೆಎಸ್ ಆರ್ ಟಿಸಿ ಬಸ್,  ಆಟೋಗಳು ಎಂದಿನಂತೆ ಸಂಚಾರ ಮಾಡುತ್ತಿದ್ದವು.ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಜಯದೇವ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ, ಮುಖ್ಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.ನಗರದ ವಿವಿಧ ಮಾರುಕಟ್ಟೆಯಲ್ಲಿ ಎಂದಿನಂತೆ ನಡೆದಿರುವ ಹೂ ಹಣ್ಣು ಸೇರಿದಂತೆ ಎಲ್ಲಾ ಬಗೆಯ ವ್ಯಾಪಾರ ವಹಿವಾಟು ಎಂದಿನಂತೆ ಸಹಜವಾಗಿ ನಡೆದಿತ್ತು.ಬಂದ್ ವೇಳೆ ಕೆಲವೆಡೆ ಸಂಚರಿಸುತ್ತಿದ್ದ ಖಾಸಗಿ, ನಗರ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳಿಗೆ ತಡೆ ಒಡ್ಡಲಾಯಿತಾದರೂ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿ ಮಾಡಿದರು.ಇನ್ನೂ ಕೆಲವೆಡ ಬಸ್ ಗಳಿಗೆ ಸಂಚರಿಸದಂತೆ ಅಡ್ಡ ಹಾಕಿದ ಪ್ರತಿಭಟನಾಕಾರರು ಬಸ್ಸುಗಳನ್ನು ವಾಪಸ್ ಕಳಿಸಿದರು.ಇದಲ್ಲದೇ ಕರ್ನಾಟಕ ಬಂದ್ ಹಿನ್ನಲೆ ಸಂಚಾರ ಬಂದ್ ಮಾಡಿ ಬೆಂಬಲ ನೀಡುವಂತೆ ಒತ್ತಾಯ ಮಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಇನ್ನು ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಕನ್ನಡಪರ ಸಂಘಟನೆಗಳ ಮುಖಂಡರು ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅಧಿಕಾರಕ್ಕೆ ಬಂದ ಸರ್ಕಾರಗಳು ಈ ಬಗ್ಗೆ ಯಾವುದೇ ರಾಜಕೀಯ ಇಚ್ಚಾಶಕ್ತಿ ತೋರಿಸದ ಕಾರಣ ಇಂಥ ಸಮಸ್ಯೆ ತಲೆದೋರಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಜೊತೆಗೆ ಕುಡಿಯಲು ನೀರು ಸಹ ಸರಿಯಾಗಿ ಸಿಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ 3000 ಕ್ಯೂಸೆಕ್ ನೀರು ಹರಿಸುವುದು ಸರಿಯಲ್ಲ. ಸರ್ಕಾರ ಕೂಡಲೇ ತಮಿಳುನಾಡಿಗೆ ನೀರು ಹರಿಸುವಿಕೆ ಬಂದ್ ಮಾಡಬೇಕು ಎಂದು ಆಗ್ರಹಿಸಿದರು.ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸಿರುವುದರ ಬಗ್ಗೆ  ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಉದ್ಬವಿಸಿರುವ ಕಾವೇರಿ ವಿವಾದ ಹಾಗೂ ಸುಪ್ರೀಂಕೋರ್ಟ್ ಆದೇಶದನ್ವಯ. ತಮಿಳುನಾಡಿಗೆ ಪ್ರತಿ ನಿತ್ಯ ನದಿನೀರು ಹರಿಸುವುದಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ರಾಜಕೀಯ ಬದ್ಧತೆ ಹಾಗೂ ರಾಜ್ಯದ ಜನರ ಹಿತ ಕಾಡಾಡಬಹುದಿತ್ತು. ಈ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುಮಾರು 245 ವರ್ಷಗಳ ಇತಿಹಾಸವಿರುವ ಬ್ರಿಟಿಷರ ಕಾಲದ ಮದ್ರಾಸ್ ಪ್ರಾಂತ್ಯದ ಈ ಹಿಂದೆ ರಚಿಸಿರುವ ಕಾವೇರಿ ನದಿನೀರು ಹಂಚಿಕೆ ಪ್ರಾಧಿಕಾರ ಸಮಿತಿಯ ವಿಸರ್ಜಿಸಿ, ಹೊಸ ಸದಸ್ಯರ ನೇಮಕ ಆಗಬೇಕು. ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗುವಂಥ ತಜ್ಞರ ನೇಮಕ ಮಾಡಬೇಕು. ತಮಿಳುನಾಡು ಕೇಳಿದಂತೆ ನೀರು ಹರಿಸುವುದನ್ನು ಬಿಡಬೇಕು. ಮೊದಲು ರಾಜ್ಯಕ್ಕೆ ಆದ್ಯತೆ ನೀಡಿ. ಆಮೇಲೆ ತಮಿಳುನಾಡಿಗೆ ನೀರು ಹರಿಸಲಿ. ಡ್ಯಾಂನಲ್ಲಿಯೇ ಹೆಚ್ಚು ನೀರಿಲ್ಲ. ಬೇರೆ ರಾಜ್ಯಕ್ಕೆ ನೀರು ಹರಿಸಿದರೆ ಇಲ್ಲಿನ ರೈತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.ಕೇಂದ್ರ ಸರ್ಕಾರವು ಕೂಡಲೇ ಮಧ್ಯ ಪ್ರವೇಶಿಸಬೇಕು. ರಾಜ್ಯದಿಂದ ಬಿಜೆಪಿಯ 25 ಸಂಸದರು ಗೆದ್ದಿದ್ದಾರೆ. ಇವರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಬೇಕು. ರಾಜಕೀಯ ಮರೆತು ರಾಜ್ಯದ ರೈತರ, ಜನರ ಹಿತಕ್ಕಾಗಿ ಒತ್ತಾಯ ಹೇರಬೇಕು. ಕಾವೇರಿ ನದಿ ನೀರು ಹಂಚಿಕೆ ವಿಚಾರ ಬಂದಾಗಲೆಲ್ಲಾ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ವೈಷಮ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲೇಬೇಕು. ಅಲ್ಲಿಯವರೆಗೆ ಈ ಸಮಸ್ಯೆ ಬಗೆಹರಿಯದು ಎಂದು ಪ್ರತಿಭಟನಾಕಾರರು ಹೇಳಿದರು.