ಕರ್ನಾಟಕ ಪ್ರಾಂತ ರೈತ ಸಂಘ; ಇಂಗಳಗಿ ಗ್ರಾಮ ಶಾಖಾ ಸಮಾವೇಶ

ವಾಡಿ:ಎ.2: ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನವಾಗಿವೆ. ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಾರ್ಪೋರೇಟ್ ಕಂಪನಿಗಳು ರೈತರ ಮೇಲೆ ಸರ್ವಾಧಿಕಾರಿಯಾಗುತ್ತವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣ ಸಮೀಪದ ಇಂಗಳಗಿ ಗ್ರಾಮದಲ್ಲಿ ಹಮ್ಮಿಕೊಂಡ ಕರ್ನಾಟಕ ಪ್ರಾಂತ ರೈತ ಸಂಘದ ಇಂಗಳಗಿ ಗ್ರಾಮ ಶಾಖಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಮಿನಾಥನ್ ವರದಿ ಬಗ್ಗೆ ಉಲ್ಲೇಖ ಮಾಡಿಲ್ಲ. ಹೊಸ ಕೃಷಿ ಕಾಯ್ದೆಗಳಿಂದ ಪ್ರಸ್ತುತ ಜಾರಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ ಕಿತ್ತು ಹಾಕುತ್ತವೆ ಎಂದು ಆರೋಪಿಸಿದರು.

ಕೃಷಿ ರಂಗ ಜಾರಿಗೆ ತಂದಿರುವ ಕಾರ್ಮಿಕರ ಕೂಲಿ ದಿನಕ್ಕೆ 420 ರೂಪಾಯಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನೀಡಬೇಕು. ನರೇಗಾದಲ್ಲಿ 200 ಮಾನವ ದಿನಗಳು ಹೆಚ್ಚಳ ಮಾಡಬೇಕು ಎಂದು ಮ್ಯಾಗೇರಿ ಸರಕಾರಕ್ಕೆ ಒತ್ತಾಯಿಸಿದರು.

ಇಂಗಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಯಾಮೇರ್ ಕಾರ್ಮಿಕರ ಸನ್ಮಾನ ಸ್ವೀಕರಿಸಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ನೂರಾರು ಕಾರ್ಮಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಕಾರ್ಮಿಕರು ತಮ್ಮ ಸಮಸ್ಯೆ ನೇರವಾಗಿ ತಿಳಿಸಬಹುದು ಎಂದು ಹೇಳಿದರು.

ಕಾರ್ಮಿಕ ಮುಖಂಡರು ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಮಿಕರ ಹಕ್ಕಿಗಾಗಿ ನಿರಂತರ ಹೋರಾಟ ಮಾಡಬೇಕಾಗುತ್ತದೆ. ಅಂದಾಗ ಮಾತ್ರ ದುಡಿಯುವ ವರ್ಗಕ್ಕೆ ನ್ಯಾಯ ದೊರೆಯುತ್ತದೆ. ಇದರಿಂದ ತಳ ಮಟ್ಟದಲ್ಲೇ ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ರೂಪಿಸಬೇಕು ಎಂದು ಯಾಮೇರ್ ಸಲಹೆ ನೀಡಿದರು.

ಕೆಪಿಆರ್‍ಎಸ್ ಗ್ರಾಮ ಶಾಖೆ ಕಾರ್ಯದರ್ಶಿ ಶಕುಂತಲಾ ಪವಾರ್ ನಿರೂಪಿಸಿದರು. ಸುಧಾರಾಣಿ ಗುಡುಬಾ ಸ್ವಾಗತಿಸಿದರು. ಶೇಖಮ್ಮ ಕುರಿ ವಂದಿಸಿದರು.

ಕೆಪಿಆರ್‍ಎಸ್ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಸುಭಾಷ್ ಜೇವರ್ಗಿ, ಸಿಐಟಿಯು ಅಧ್ಯಕ್ಷೆ ಶೇಖಮ್ಮ ಕುರಿ, ರಾಯಪ್ಪ ಹೂರಮುಂಜಿ, ಕೆಪಿಆರ್‍ಎಸ್ ತಾಲ್ಲೂಕು ಅಧ್ಯಕ್ಷ ಸಾಯಬಣ್ಣಾ ಗುಡುಬಾ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ಮುಭಾರಕ್ ಇನಾಮದಾರ್, ಶಿವಮ್ಮ ಹಿಂದಿನಕೆರಿ, ವಿಜಯಲತಾ ಸಂಗನ್ ಇದ್ದರು.

ಕೆಪಿಆರ್‍ಎಸ್ ಗ್ರಾಮ ಶಾಖಾ ಪಧಾಧಿಕಾರಿಗಳ ಆಯ್ಕೆ:

ಭಾಗಮ್ಮ ಓರಹುಣಚಿ(ಅಧ್ಯಕ್ಷೆ), ಶಕುಂತಲಾ ಪವಾರ್(ಕಾರ್ಯದರ್ಶಿ), ವಿಜಯಲತಾ ಸಂಗನ್(ಖಜಾಂಚಿ) ಅವರಿಗೆ ಕೆಪಿಆರ್‍ಎಸ್ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಸಂಘಟನೆಯ ಧ್ವಜ ನೀಡಿ ಗ್ರಾಮ ಶಾಖಾ ಪಧಾಧಿಕಾರಿಗಳಾಗಿ ಆಯ್ಕೆ ಮಾಡಿದರು.