ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ

ವಿಜಯಪುರ.ಫೆ೨೩: ಪಟ್ಟಣದ ಅಖಿಲ ಕರ್ನಾಟಕ ಮಿತ್ರ ಸಂಘದ ವತಿಯಿಂದ ಫೆಬ್ರವರಿ ೨೪ರ ಶನಿವಾರದಂದು ಬೆಳಗ್ಗೆ ೧೧:೩೦ಕ್ಕೆ ಮಹಾತ್ಮ ಪ್ರೌಢಶಾಲೆಯಲ್ಲಿ ೬೮ನೇ ಕನ್ನಡ ರಾಜ್ಯೋತ್ಸವ, ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ಉತ್ಸವ ೨೦೨೩-೨೪, ಮಾಹಿತಿ ತಂತ್ರಜ್ಞಾನದ ಹಾಗೂ ಗುತ್ತಿಗೆದಾರರ ಮತ್ತು ಸಮಾಜಸೇವಕರ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಮಿತ್ರ ಸಂಘದ ರಾಜ್ಯಾಧ್ಯಕ್ಷ ಚಿ.ಮಾ ಸುಧಾಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ಸುವರ್ಣ ಸಂಭ್ರಮದ ಉತ್ಸವ ಅಧ್ಯಕ್ಷರಾಗಿ ಶಿಡ್ಲಘಟ್ಟ ಕ್ಷೇತ್ರದ ದಾನಿಗಳಾದ ಎಡಿಬಿ ಪ್ರತಿಷ್ಠಾನದ ಅಧ್ಯಕ್ಷರಾದ ರಾಜೀವ್‌ಗೌಡ, ಮಾಹಿತಿ ಮತ್ತು ತಂತ್ರಜ್ಞಾನದ ಉತ್ಸವಾಧ್ಯಕ್ಷರಾಗಿ ನೇಟೀವ್ ಡ್ರೀಮ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಪಿ ಆರ್ ಚಂದನ್ ರವರನ್ನು, ಕಾರ್ಮಿಕ ಗುತ್ತಿಗೆದಾರರಾದ ಉತ್ಸವಾಧ್ಯಕ್ಷರಾಗಿ ದೊಡ್ಡಬಳ್ಳಾಪುರ ಕೈಗಾರಿಕಾ ವಲಯದ ದೇವಗಾನಹಳ್ಳಿ ಕ್ಯಾತೇಗೌಡ ರವರನ್ನು, ಸಮಾಜಸೇವಕರ ಉತ್ಸವ ಅಧ್ಯಕ್ಷರನ್ನಾಗಿ ಜಿಕೆವಿಕೆಯ ಕುರಿ ಮತ್ತು ಉಣ್ಣೆ ಉತ್ಪಾದಕ ಸಂಘದ ಮಾಜಿ ಅಧ್ಯಕ್ಷರಾದ ಬಿಕೆ ನಾರಾಯಣಸ್ವಾಮಿ ರವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿರುವರು.
ಬೆಳಗ್ಗೆ ೯ ಗಂಟೆಗೆ ಅಖಿಲ ಕರ್ನಾಟಕ ಮಿತ್ರ ಸಂಘದ ಗೌರವ ಕಾರ್ಯದರ್ಶಿ ಆರ್ ಮುನಿರಾಜುರವರು ಕನ್ನಡ ಧ್ವಜಾರೋಹಣ ನೆರವೇರಿಸಲಿರುವರು. ೯:೩೦ಕ್ಕೆ ಎಲ್ಲಾ ಉತ್ಸವಧ್ಯಕ್ಷಗಳನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ರಾಜಭೀದಿಗಳಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಗುವುದು.
ಸಹಕಾರ ಪತ್ರಿಕೆಯ ಸಂಪಾದಕರು ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಿ ರುದ್ರಪ್ಪ ರವರು ಉದ್ಘಾಟನೆ ನೆರವೇರಿಸಲಿದ್ದು, ಉತ್ಸವ ಅಧ್ಯಕ್ಷರುಗಳಿಗೆ ಗೌರವ ಸಮರ್ಪಣೆ ಅರ್ಪಿಸುವರು. ಅಖಿಲ ಕರ್ನಾಟಕ ಮಿತ್ರ ಸಂಘದ ರಾಜ್ಯಾಧ್ಯಕ್ಷ ಚಿ.ಮಾ ಸುಧಾಕರ್ ಪ್ರಾಸ್ತಾವಿಕ ನುಡಿ ನುಡಿಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಡ್ಲಘಟ್ಟ ತಾಲೂಕು ನಾಗಮಂಗಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್ ಸಿ ಮುನವೆಂಕಟ್‌ರಮಣ ವಹಿಸಲಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಎಮ್ ಶಿವಕುಮಾರ್ ರವರು ಪ್ರಶಸ್ತಿ ಪ್ರಧಾನ ಮಾಡಲಿರುವರು.
ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಮಿತ್ರ ಸಂಘದ ವಿಎನ್ ಸೂರ್ಯಪ್ರಕಾಶ್, ಕಾರ್ಯಾಧ್ಯಕ್ಷ ರಾದ ವಿ ವಿಶ್ವನಾಥ್, ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಹಡಪದ್, ಉಪಾಧ್ಯಕ್ಷರಾದ ಕೆಎಚ್ ಚಂದ್ರಶೇಖರ್ ಭಾಗವಹಿಸಲಿರುವರು. ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವದ ಸ್ಮರಣಾರ್ಥ ಹಿರಿಯ ಸ್ಮರಣೀಯರ ಸಾಧಕರ ಹೆಸರಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ಮಳ್ಳೂರು ನಾಗಪ್ಪ ರವರ ಹೆಸರಿನಲ್ಲಿ ರೇಷ್ಮೆ ಕೃಷಿ ಪ್ರಶಸ್ತಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಟಿ ಸಿದ್ದಲಿಂಗಯ್ಯ ರವರ ಹೆಸರಿನಲ್ಲಿ ಸಮಾಜ ಸೇವಾ ಪ್ರಶಸ್ತಿ, ಬೂದಿಗೆರೆ ವೈಯಂ. ಗವಿಯಪ್ಪನವರ ಹೆಸರಿನಲ್ಲಿ, ಮಳ್ಳೂರು ಪಾಪಣ್ಣ ರವರ ಹೆಸರಿನಲ್ಲಿ, ಹಾಗೂ ನಮ್ಮ ಬದುಕು ಸಿನಿಮಾ ಸಹಾಯಕ ನಿರ್ದೇಶಕರಾದ ಜಂಗಮಕೋಟೆ ಸತ್ಯನಾರಾಯಣರವರ ಹೆಸರಿನಲ್ಲಿ, ಮಾಜಿ ಪುರಸಭಾ ಉಪಾಧ್ಯಕ್ಷರಾಗಿದ್ದ ಸಿ ಎಚ್ ಬಾಬಾ ಸಾಹೇಬ್ ರವರ ಹೆಸರಿನಲ್ಲಿ ಶಿಕ್ಷಕರ ಪ್ರಶಸ್ತಿ, ರಂಗಭೂಮಿ ಕಲಾವಿದರಾಗಿದ್ದ ಹಾರೋಹಳ್ಳಿ ಎನ್ ರಾಜಗೋಪಾಲ್ ರವರ ಪ್ರಶಸ್ತಿ ಮುಂತಾಗಿ ಹತ್ತು ಹಲವು ಹಿರಿಯರ ಸ್ಮರಣಾರ್ಥ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.