ರಾಮನಗರ,ಜೂ.9- ಪರಿಶಿಷ್ಟ ಜಾತಿ, ಪಂಗಡದ ಸಮುದಾಯದ ಜನರಿಗೆ ತಿಳಿವಳಿಕೆಯ ಅಗತ್ಯತೆಯಿದೆ ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜೆ.ಶ್ರೀನಿವಾಸನ್ ಅಭಿಪ್ರಾಯಪಟ್ಟರು.
ನಗರದ ವಿಜಯನಗರದಲ್ಲಿ ಜಿಲ್ಲಾ ದಲಿತ ಉದ್ದಿಮೆದಾರರ ಸಂಘದ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ನಮ್ಮ ಸಮುದಾಯದ ಜನಾಂಗದವರು ಆರ್ಥಿಕವಾಗಿ ಬಲಿಷ್ಠರಾಗಿ ಬೆಳೆಯಬೇಕು. ರಾಜಕೀಯ ಪಕ್ಷಗಳ ಬಳಿ ದುಡ್ಡಿಗೆ ನಮ್ಮ ಜನಾಂಗ ಬಲಿಯಾದರೆ ಅವರು ನಮ್ಮನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಹಾಗಾಗಿ ನಾವು ನಮ್ಮ ಹಕ್ಕನ್ನು ಪ್ರತಿಪಾದಿಸಿ ಪಡೆಯುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ೨೦೦೯ರಲ್ಲಿ ರಾಜ್ಯ ಮಟ್ಟದಲ್ಲಿ ಸಂಘಟನೆ ಯನ್ನು ಸ್ಥಾಪನೆ ಮಾಡಲಾಯಿತು ಎಂದರು.
ರಾಷ್ಟ್ರೀಯ ಬ್ಯಾಂಕ್‌ಗಳಿಂದ ಶೇ.೪ರ ಬಡ್ಡಿದರದಲ್ಲಿ ೧೦ ಕೋಟಿ ರೂ. ವರೆಗೆ ಸಾಲ ಪಡೆಯಬಹುದಾಗಿದೆ. ೮ ವರ್ಷಗಳ ಕಾಲ ಸಾಲ ಮರುಪಾವತಿಗೆ ಅವಕಾಶವಿದೆ. ಈ ಸಾಲ ಪಡೆಯುವ ಪಲಾನುಭವಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೆರವು ಸಹ ಸಿಗಲಿದೆ ಎಂದು ಹಲವು ಯೋಜನೆಗಳ ಬಗ್ಗೆ ಸಮುದಾಯದ ಜನರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವೆಂಕಟಶ್ ಮೂರ್ತಿ, ಗೋಪಿ, ಚಲುವರಾಜು, ಜಗದೀಶ್, ಮಹೇಶ್ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸಲಹೆ ನೀಡಿದರು.
ದಲಿತ ಉದ್ದಿಮೆದಾರರ ಜಿಲ್ಲಾ ಸಂಘದ ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಅತೀ ಹೆಚ್ಚು ದಲಿತ ಜನರಿದ್ದರೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ವಿಫಲರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಸಂಘಟಿತರಾಗಿ ಉದ್ದಿಮೆದಾರರಾಗಿ ಹೊರ ಹೊಮ್ಮುವ ಅವಶ್ಯಕತೆಯಿದೆ. ಹಾಗಾಗಿ ರಾಮನಗರ ಜಿಲ್ಲಾ ದಲಿತ ಉದ್ದಿಮೆದಾರರ ಸಂಘ (ಆರ್‌ಡಿಇಏ) ಸ್ಥಾಪಿಸಿರುವುದಾಗಿ ಹೇಳಿದರು.
ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಪ್ರಧಾನ ಕಾರ್ಯದರ್ಶಿ ಜನಾರ್ದನ್, ಕಾರ್ಯದರ್ಶಿ ಗೋಪಿ ಪದಾಧಿಕಾರಿಗಳಾದ ಕಿರಣ್, ಗಿರಿರಾಜ್, ಸಿದ್ದಾರ್ಥ, ವೆಂಕಟೇಶ್ ಪ್ರಕಾಶ್, ಕೆ.ರಾಜು, ಮಲ್ಲಿಕಾರ್ಜನ್, ಪ್ರಕಾಶ್ ಮುಖಂಡರಾದ ಪಾಪಣ್ಣ, ನರಸಿಂಹಯ್ಯ, ಕುಂಬಾಪುರ ಬಾಬು, ವೆಂಕಟಾಚಲ, ನಗರಸಭೆ ಸದಸ್ಯರಾದ ಜಯಲಕ್ಷ್ಮಮ್ಮ, ಶಿವಸ್ವಾಮಿ (ಅಪ್ಪಿ) ಇದ್ದರು.