ಕರ್ನಾಟಕ ಗ್ರಾಮೀಣ ಬ್ಯಾಂಕ್ಅಧಿಕಾರಿಗಳ ಮತ್ತು ನೌಕರರ ಸರದಿ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.19: ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಸಂಘಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನೌಕರರ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಸರದಿ ಧರಣಿ ಸತ್ಯಾಗ್ರಹ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಜ.16 ರಿಂದ 31ರ ವರೆಗೆ ಎರಡೂ ಸಂಘಗಳ ಜಿಲ್ಲಾವಾರು ಪದಾಧಿಕಾರಿಗಳು, ಕೇಂದ್ರ ಸಮಿತಿ ಸದಸ್ಯರು, ಮಹಿಳಾ ಪ್ರತಿನಿಧಿಗಳು ಮತ್ತು ಹಿರಿಯ ನಿವೃತ್ತ ಸಹೊದ್ಯೋಗಿ ಮಿತ್ರರು ಪ್ರತಿದಿನ ರಾಜ್ಯದ ಬೇರೆ ಬೇರೆ ಜಿಲ್ಲೆಯ  ಪದಾಧಿಕಾರಿಗಳು ಈ ಸರದಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
 ಜ.16 ರಂದು ದಾವಣಗೆರೆ ಜಿಲ್ಲಾ ಸಮಿತಿಯ 25 ರಿಂದ 30 ಜನ ಧರಣಿ ಕಾರ್ಯಕ್ರಮದಲ್ಲಿ, ಜ.17ರಂದು ಚಿತ್ರದುರ್ಗ ಜಿಲ್ಲಾ ಸಮಿತಿಯ 30 ರಿಂದ 35 ಜನ, ಜ.18ರಂದು ಚಿಕ್ಕಮಗಳೂರು, ಮಡಿಕೇರಿ, ಹಾಸನ ಜಿಲ್ಲಾ ಸಮಿತಿಯ 70 ರಿಂದ 80 ಜನ ಪಾಲ್ಗೊಂಡಿದ್ದರು. ಹಾಗೂ ಇಂದು ಯಾದಗಿರಿ ಮತ್ತು ಬೀದರ ಜಿಲ್ಲಾ ಸಮಿತಿಗಳ 40 ರಿಂದ 50 ಜನ ಈ ಸದರಿ ಧರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಮುಖ ಬೇಡಿಕೆಗಳಾದ ಕಳೆದ ಮೂರು ದಶಕಗಳಿಂದ ಬ್ಯಾಂಕ್‍ನಲ್ಲಿ ದುಡಿಯುತ್ತಿರುವ ದಿನಗೂಲಿ/ಹೊರಗುತ್ತಿಗೆ ನೌಕರರನ್ನು ಕಾರ್ಮಿಕ ನ್ಯಾಯಾಲಯದ ಆದೇಶದಂತೆ ಖಾಯಂಗೊಳಿಸಬೇಕು. ಪ್ರೇರಕ ಬ್ಯಾಂಕಿನಲ್ಲಿರುವಂತಹ ಎಲ್ಲಾ ಸೌಲಭ್ಯ / ಭತ್ಯೆಗಳನ್ನು ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೆ ಸಮನಾಗಿ ನೀಡಬೇಕು. ಗ್ರಾಹಕರ ತ್ವರಿತ ಸೇವೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಯೊಂದು ಹುದ್ದೆಗೂ ನೇರ ನೇಮಕಾತಿಗಳನ್ನು ಮಾಡಬೇಕು. ಕಂಪ್ಯೂಟರ್ ಇಂಕ್ರಿಮೆಂಟನ್ನು ನ್ಯಾಯಾಲಯದ ಆದೇಶದಂತೆ ಎಲ್ಲರಿಗೂ ವಿಸ್ತರಿಸಬೇಕು ಸೇರಿದಂತೆ  ಇನ್ನೂ ಹಲವಾರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳು ಹೋರಾಟವನ್ನು ಮಾಡುತ್ತಿದ್ದಾರೆ. ಈ ಹೋರಾಟಗಳಿಗೆ ಸರ್ವ ಸದಸ್ಯರು ಬೆಂಬಲವನ್ನು ಸೂಚಿಸಿ ಹೋರಾಟದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುತ್ತಿರುವುದಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ್ ತೇರದಾಳ್ ಹಾಗೂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಮದುಕುಂಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.