
ಕೋಲಾರ,ನ,೩- ಯುವಜನತೆ ಕರ್ನಾಟಕದ ಭಾಷೆ, ಸಂಸ್ಕೃತಿ,ಆಡಳಿತ, ಆಚಾರ ವಿಚಾರಗಳ ಇತಿಹಾಸವನ್ನು ಓದುವ ಮೂಲಕ ಅರಿತು ಉಳಿಸುವ ಕೆಲಸ ಮಾಡಬೇಕು. ಇಡೀ ವಿಶ್ವದಲ್ಲಿ ಕರ್ನಾಟಕದ ಸ್ಥಾನವನ್ನು ಉತ್ತಮ ಮಟ್ಟದಲ್ಲಿ ಗುರತಿಸಲ್ಪಟ್ಟಿದ್ದು ಇದನ್ನು ಉಳಿಸುವ ಮತ್ತು ಬೆಳೆಸು ಕಾರ್ಯ ವರ್ಷದ ಎಲ್ಲಾ ದಿನಗಳಲ್ಲಿ ಸಾಗಬೇಕು. ಕರ್ನಾಟಕ ಸಾಹಿತ್ಯ, ಕಲೆ, ಜಾನಪದ ಶೈಲಿಗಳಿಗೆ ಹೆಸರಾಗಿದ್ದು ಯುವ ಜನತೆ ಇಂತಹ ಕೌಶಲಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಕರ್ನಾಟಕದ ಗತವೈಭವನ್ನು ಉಳಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷೆ ಕುರ್ಕಿ ರಾಜೇಶ್ವರಿ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ರೋಟರಿ ಕೋಲಾರ ನಂದಿನಿ ವತಿಯಿಂದ ನಗರದ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸ್ಥಬ್ದ ಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡುತ್ತಾ ಯುವನತೆಯು ಇಂದು ಓದುವ ಹವ್ಯಾಸವನ್ನು ಹೆಚ್ಚಿಸಿಕೊಂಡು ನಮ್ಮ ನಾಡು ನುಡಿಗಾಗಿ ದುಡಿದ ಮಹನೀಯ ಪುಸ್ತಕಗಳನ್ನು ಓದುವ ಮೂಲಕ ಕನ್ನಡದ ಇತಿಹಾಸವನ್ನು ಅರಿಯಬೇಕು ಎಂದು ತಿಳಿಸಿದರು.
ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ರವರು ಮಾತನಾಡಿ ಕೋಲಾರ ಜಿಲ್ಲೆ ಗಡಿ ಜಿಲ್ಲೆಯಾಗಿದ್ದು ನಮ್ಮ ಮೇಲೆ ತೆಲುಗು ಮತ್ತು ತಮಿಳು ಭಾಷೆಗಳ ಪ್ರಭಾವ ಇದ್ದರೂ ಸಹ ನಮ್ಮ ಜಿಲ್ಲೆಯ ಜನ ಕನ್ನಡವನ್ನು ಉಳಿಸಿ ಬೆಳೆಸು ಕಾರ್ಯದಲ್ಲಿ ನಿರತರಾಗಿದ್ದಾರೆ, ಎಲ್ಲರೂ ಕನ್ನಡ ಭಾಷೆಯನ್ನು ಮಾತೃ ಭಾಷೆಯಾಗಿ ಬಳಸಿದರೆ ಮಕ್ಕಳ ಶಿಕ್ಷಣಕ್ಕೆ ಸುಲಭವಾಗಲಿದೆ. ಯುವಕರು ಕನ್ನಡ ಭಾಷೆ, ಸಾಹಿತ್ಯ, ಪರಂಪರೆಯನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು, ಕನ್ನಡ ರಾಜ್ಯೋತ್ಸವ ಒಂದು ದಿನದ ಕಾರ್ಯಕ್ರಮಕ್ಕೆ ಮೀಸಲಾಗಿಸದೇ ಇಡೀ ವರ್ಷದ ಕಾರ್ಯಕ್ರಮದಂತೆ ಭಾಷೆಯನ್ನು ಬಳಸಬೇಕು ಎಂದು ತಿಳಿಸಿದರು.
ಈ ವರ್ಷ ಯಶಸ್ವಿ ಚಂದ್ರಯಾನದ ಮಾದರಿ ಸ್ಥಬ್ಧ ಚಿತ್ರವನ್ನು ತಯಾರು ಮಾಡಿ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಕ್ತರಾದ ಕೆ.ಆರ್.ಸುರೇಶ್, ಜಿಲ್ಲಾ ಜಂಟಿ ಕಾರ್ಯದರ್ಶಿ ಉಮಾದೇವಿ, ಜಿಲ್ಲಾ ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ಜಿಲ್ಲಾ ಕೋಶಾಧಿಕಾರಿ ಉಮೇಶ್, ಜಿಲ್ಲಾ ಸ್ಥಾನಿಕ ಆಯುಕ್ತರಾದ ಸುಮಂಗಲಿ ನೋಹಾ, ದೇವಿ ಜವೇರಾ, ಸಂಘಟಕ ವಿಶ್ವನಾಥ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಮಧು, ರೋ.ರಮೇಶ್ ನಾಯಕ್, ಯುವ ಸಮಿತಿ ವೆಂಕಟೇಗೌಡ, ನಿರಂಜನ್, ಮಂಜುನಾಥ್, ಶಶಿಕುಮಾರ್, ದರ್ಶನ್, ವೇಣು , ನರೇಂದ್ರ, ಗಂಗರಾಜ್, ವಿಸ್ಮಯ, ವೈಶಾಲಿ ಮುಂತಾದವರು ಉಪಸ್ಥಿತರಿದ್ದರು.
:=: